ಅಮರಾವತಿ : ಖ್ಯಾತ ಚಲನಚಿತ್ರ ನಿರ್ಮಾಪಕ ಕೆ.ವಿಶ್ವನಾಥ್ (92) ಅವರು ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ನಿನ್ನೆ ತಡರಾತ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
‘ಕಲಾತಪಸ್ವಿ’ ಎಂದೇ ಖ್ಯಾತರಾಗಿರುವ ವಿಶ್ವನಾಥ್ ಅವರು ಫೆಬ್ರವರಿ 1930ರಲ್ಲಿ ಆಂಧ್ರಪ್ರದೇಶದಲ್ಲಿ ಜನಿಸಿದರು. 1951ರಲ್ಲಿ ಪಾತಾಳ ಭೈರವಿ ಸಿನಿಮಾದ ಮೂಲಕ ಸಹಾಯಕ ನಿರ್ದೇಶಕರಾಗಿ ಸಿನಿಮಾ ರಂಗದಲ್ಲಿ ವೃತ್ತಿ ಜೀವನ ಆರಂಭಿಸಿದ ಕೆ ವಿಶ್ವನಾಥ್, 1965 ರಲ್ಲಿ `ಆತ್ಮ ಗೌರವಂ’ ಸಿನಿಮಾದ ಮೂಲಕ ನಿರ್ದೇಶನಕ್ಕೆ ಕಾಲಿಟ್ಟರು.
ತೆಲುಗಿನಲ್ಲಿ ‘ಸ್ವಾತಿ ಮುತ್ಯಂ’, ‘ಶಂಕರಾಭರಣಂ, ‘ಸಾಗರ ಸಂಗಮಮ್’ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳನ್ನು ವಿಶ್ವನಾಥ್ ನೀಡಿದ್ದಾರೆ. ‘ಸ್ವಾತಿ ಮುತ್ಯಂ’ ಸಿನಿಮಾ ಕನ್ನಡಕ್ಕೆ ‘ಸ್ವಾತಿ ಮುತ್ತು’ ಆಗಿ ರಿಮೇಕ್ ಆಗಿತ್ತು. ‘ಸ್ವಾತಿ ಮುತ್ಯಂ’ ಮಾತ್ರವಲ್ಲದೆ ಅವರ ನಿರ್ದೇಶನದ ಇನ್ನೂ ಹಲವು ಸಿನಿಮಾಗಳು ಕನ್ನಡಕ್ಕೆ ರಿಮೇಕ್ ಆಗಿವೆ.
ದಾದಾಸಾಹೇಬ್ ಫಾಲ್ಕೆ ಸೇರಿ ಐದು ರಾಷ್ಟ್ರಪ್ರಶಸ್ತಿಗಳು ಅವರಿಗೆ ಲಭಿಸಿವೆ. ತೆಲುಗಿನ ಪ್ರತಿಷ್ಠಿತ ನಂದಿ ಅವಾರ್ಡ್ ನ ಅವರು ಎಂಟು ಬಾರಿ ಪಡೆದುಕೊಂಡಿದ್ದರು. ಅವರ ನಿಧನಕ್ಕೆ ಚಿತ್ರರಂಗದ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ.










