ಬಿಜೆಪಿಯದ್ದು ತ್ರಿಬಲ್ ಇಂಜಿನ್ ಸರ್ಕಾರ : ಹೆಚ್.ಡಿ.ಕುಮಾರಸ್ವಾಮಿ.

71
firstsuddi

ಧಾರವಾಡ : ಮಂಡ್ಯದಲ್ಲಿ ನಾನು ಯಶಸ್ವಿಯಾಗಿ ರ‍್ಯಾಲಿ ಮಾಡಿದ್ದೇನೆ. ಆ ಭಾಗದಲ್ಲಿ ನೆಲೆಯೂರಿರುವ ಕುಟುಂಬದ ಪಕ್ಷವಾದ ಜೆಡಿಎಸ್ ಈ ಬಾರಿ ಜನರು ದೂರ ಸರಿಸಲಿದ್ದಾರೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿರುಗೇಟು ನೀಡಿದರು. ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯದ್ದು ತ್ರಿಬಲ್ ಇಂಜಿನ್ ಸರ್ಕಾರ. ಇವರು ಕರ್ನಾಟಕ ಉಳಿಸುತ್ತಾರಾ ಎಂದು ಪ್ರಶ್ನಿಸಿದರು.

ಸಂವಿಧಾನದ ವ್ಯವಸ್ಥೆಯನ್ನು ಅಮಿತ್ ಶಾ ತಿಳಿದುಕೊಂಡಿದ್ದಾರಾ ಎಂದು ನಾನು ಅವರಿಗೆ ಕೇಳಲು ಬಯಸುತ್ತೇನೆ. ಸ್ವಾತಂತ್ರ್ಯ ಬಂದಾಗ ನಮ್ಮ ಸಂವಿಧಾನ ಆಗಿದೆ. ನಮ್ಮ ಸಂವಿಧಾನ ವಿಶ್ವಕ್ಕೆ ಮಾದರಿ. ಸಂವಿಧಾನದಲ್ಲಿ ಯಾರು ಯಾವ ವೃತ್ತಿಯನ್ನಾದರೂ ಆರಿಸಿಕೊಳ್ಳಬಹುದು. ಚುನಾವಣೆಯಲ್ಲಿ ಯಾರು ಬೇಕಾದರೂ ನಿಲ್ಲಬಹುದು. ನಾವ್ಯಾರೂ ಹಿಂಬಾಗಿಲಿನಿಂದ ಪ್ರವೇಶ ಮಾಡಿಲ್ಲ. ಹೋರಾಟದ ಮೂಲಕ ನಾವು ಬಂದಿದ್ದೇವೆ. ಜನ ಸ್ವೀಕಾರ ಮಾಡಿದಾಗಲೇ ನಾವು ಜನಪ್ರತಿನಿಧಿ ಆಗಿದ್ದೇವೆ. ಅದಕ್ಕೆ ನಾವು ಇವರಿಂದ ಅನುಮತಿ ತಗೊಬೇಕಾ ಎಂದು ಹೇಳಿದರು.

ಬಿಜೆಪಿಯಲ್ಲಿ ಎಷ್ಟು ಕುಟುಂಬ ರಾಜಕಾರಣ ಇಲ್ಲ ಹೇಳಿ? ಬಿಸಿಸಿಐಯಲ್ಲಿ ಅವರ ಮಗನೇ (ಅಮಿತ್ ಶಾ ಪುತ್ರ) ಇದ್ದಾನೆ. ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಅವನಿಗೆ ಅಧಿಕಾರ ಕೊಟ್ಟಿದ್ದಾರೆ. ಅವನ ಸಾಧನೆ ಏನು? ಬಿಜೆಪಿಯಲ್ಲಿ ಎಷ್ಟು ಜನ ಅಪ್ಪ-ಮಕ್ಕಳು ರಾಜಕಾರಣದಲ್ಲಿ ಇಲ್ಲ? ಹುಬ್ಬಳ್ಳಿ, ಧಾರವಾಡದಲ್ಲೇ ಎಷ್ಟು ಜನ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.

ದೇವೇಗೌಡರದ್ದು ಮಾತ್ರ ಕುಟುಂಬ ರಾಜಕಾರಣನಾ? ಇದು ಎಲ್ಲ ಪಕ್ಷದಲ್ಲಿ ಸರ್ವೇ ಸಾಮಾನ್ಯ. ಅಮಿತ್ ಶಾ ಸರ್ಟಿಫಿಕೇಟ್ ನನಗೆ ಬೇಡ. ನಾವು ಜನರ ನೋವಿಗೆ ಸ್ಪಂದಿಸಿ ರಾಜಕಾರಣ ಮಾಡುತ್ತೇವೆ. ಅವರಂತೆ ಅಮಾಯಕರ ಬಲಿ ಕೊಟ್ಟು ರಾಜಕಾರಣ ಮಾಡಲ್ಲ. ಅವರ ದುರಹಂಕಾರ ಏನಾಗಲಿದೆ ನೋಡಿ. ಇದು ಯುಪಿ, ಬಿಹಾರ ಅಲ್ಲ. ನಮ್ಮ ರಾಜ್ಯದಲ್ಲಿ ಅವರ ಕೊಡುಗೆ ಏನು ಅಂತಾ ಹೇಳಲಿ. ಮಹದಾಯಿ ಸರಿ ಮಾಡಿದ್ದಾರಾ? ಅಲ್ಲಿ ಗೋವಾದಿಂದ ತಕರಾರು ತೆಗೆಸುತ್ತಾರೆ ಎಂದು ಟಾಂಗ್ ಕೊಟ್ಟರು.