ಬೆಂಗಳೂರು : ನಾನು ನಾನ್ ವೆಜ್ ತಿಂದಿದ್ದು ಹೌದು, ಆದರೆ ದೇವಸ್ಥಾನದ ಒಳಗೆ ಹೋಗಲಿಲ್ಲ. ದೇವಸ್ಥಾನದ ಪ್ಯಾಸೇಜ್ ಬಳಿ ಮಾತ್ರ ಹೋಗಿದ್ದು, ಗರ್ಭಗುಡಿಯ ಹೊರಭಾಗದಲ್ಲಿ ಇದ್ದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸ್ಪಷ್ಟ ಪಡಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ನಾನ್ ವೆಜ್ ತಿಂದಿದ್ದೆ ಅನ್ನೋದನ್ನ ಮರೆತಿದ್ದೆ. ಅಲ್ಲಿನ ಸ್ಥಳೀಯರ ಅಪೇಕ್ಷೆ ಮೇರೆಗೆ ಹೋಗಿದ್ದೆ. ಹೀಗಾಗಿ ನಾನು ದೇವಸ್ಥಾನ ಪ್ಯಾಸೇಜ್ ಬಳಿ ಮಾತ್ರ ಹೋಗಿದ್ದೆ. ಎಲ್ಲವನ್ನೂ ಎದೆ ಬಗೆದು ತೋರಿಸಲು ನಾನು ಹನುಮಂತ ಅಲ್ಲ. ಕಾಂಗ್ರೆಸ್ ನವರಂತೆ ನಾನು ತಿಂದು ಹೋಗಿದ್ದೆ ಏನ್ ಈಗ ಅಂತ ನಾನು ಹೇಳಲ್ಲ ಎಂದರು.
ದೇವಸ್ಥಾನದ ಆವರಣದಲ್ಲಿ ಕಟ್ಟಡ ಕಟ್ಟಲು ಮುಸ್ಲಿಮರು ಅವಕಾಶ ಕೊಟ್ಟಿರಲಿಲ್ಲ. ಈ ದೇವಸ್ಥಾನಕ್ಕೆ ಭೇಟಿ ನೀಡಬೇಕೆಂದು ಮೊದಲೇ ನಿರ್ಧಾರ ಮಾಡಿರಲಿಲ್ಲ. ಅಲ್ಲಿನ ಸ್ಥಳೀಯರೇ ಕರೆದುಕೊಂಡು ಹೋಗಿದ್ದರು. ಕೆಲವು ವೆಜ್ ಮತ್ತು ನಾನ್ ವೆಜ್ ದೇವಸ್ಥಾನಗಳಿವೆ, ನಾನ್ ವೆಜ್ ದೇವಸ್ಥಾನಗಳಲ್ಲಿ ಮಾಂಸಹಾರಿ ನೈವೇದ್ಯ ಮಾಡಲಾಗುತ್ತದೆ. ಅಂಥ ದೇವಸ್ಥಾನಗಳಿಗೆ ಹೋಗಬಹುದು ಎಂದು ಹೇಳಿದರು.
ಫೆ.19ರ ಭಾನುವಾರದಂದು ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದ್ದ ಸಿ.ಟಿ ರವಿ ಕಾರವಾರದ ಶಿವಾಜಿ ಜಯಂತಿಯಲ್ಲಿ ಭಾಗವಹಿಸಿ ನಂತರ ಭಟ್ಕಳಕ್ಕೆ ಆಗಮಿಸಿದ್ದರು. ಈ ವೇಳೆ ಭಟ್ಕಳದ ಶಿರಾಲಿಯಲ್ಲಿರುವ ಶಾಸಕ ಸುನಿಲ್ ನಾಯ್ಕ ಮನೆಯಲ್ಲಿ ಮೀನೂಟ ಸೇವಿಸಿದ್ದ ಸಿ.ಟಿ ರವಿ ಭಟ್ಕಳ ನಗರದ ಹಳೇ ಬಸ್ ನಿಲ್ದಾಣ ಸಮೀಪ ಇರುವ ನಾಗಬನ ಹಾಗೂ ಕರಿಬಂಟ ಹನುಮ ದೇವಸ್ಥಾನಕ್ಕೆ ಭಟ್ಕಳ ಶಾಸಕ ಸುನಿಲ್ ನಾಯ್ಕ ಹಾಗೂ ದೇವಸ್ಥಾನದ ಕಮಿಟಿ ಸದಸ್ಯರೊಂದಿಗೆ ಭೇಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿತ್ತು. ಈ ಘಟನೆ ವಿವಾದಕ್ಕೆ ಕಾರಣವಾಗಿದೆ.










