ಡ್ರಗ್ಸ್ ಸೇವನೆ ಆರೋಪ : 42 ವಿದ್ಯಾರ್ಥಿಗಳನ್ನು ಅಮಾನತು ಮಾಡಿದ ಮಾಹೆ…

44
firstsuddi

ಉಡುಪಿ: ಡ್ರಗ್ಸ್ ಸೇವನೆ ಆರೋಪದ ಮೇಲೆ ಮಣಿಪಾಲ ವಿಶ್ವವಿದ್ಯಾನಿಲಯವು (Manipal Academy of Higher Education (MAHE) 42 ವಿದ್ಯಾರ್ಥಿಗಳನ್ನು ಒಂದು ತಿಂಗಳ ಅವಧಿಗೆ ಅಮಾನತು ಮಾಡಿ ಆದೇಶ ಹೊರಡಿಸಿದೆ.

ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಇಂತಹ ನಿರ್ಧಾರ ಕೈಗೊಂಡಿದ್ದು, ಆರೋಗ್ಯಕರ ವಾತಾವರಣ ಸೃಷ್ಟಿಸಲು ಬದ್ಧರಾಗಿರುವುದಾಗಿ ವಿಶ್ವವಿದ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಉಡುಪಿ ಜಿಲ್ಲಾ ಎಸ್ಪಿ ಅಕ್ಷಯ್ ಹಾಕೆ ಮಚ್ಚೀಂದ್ರ, ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ನಾವು ಹಲವಾರು ಡ್ರಗ್ಸ್ ಪ್ರಕರಣಗಳನ್ನು ಪತ್ತೆ ಮಾಡಿದ್ದು, ಈ ಕಾರ್ಯಚರಣೆಯಲ್ಲಿ ಅನೇಕ ಮಂದಿ ಪೆಡ್ಲರ್ ಗಳನ್ನ ವಶಕ್ಕೆ ತೆಗೆದುಕೊಂಡಿದ್ದೇವೆ. ಪೆಡ್ಲರ್ ಗಳ ಮೂಲಕ ಗ್ರಾಹಕರು ಯಾರು ಅನ್ನೋದು ಪತ್ತೆಯಾಗಿದ್ದು, ಕೆಲ ಗ್ರಾಹಕರಿಂದ ಪೆಡ್ಲರ್ ಗಳು ಯಾರು ಅನ್ನೋದು ಪತ್ತೆಯಾಗಿದೆ. ಮಾಹೆಯ ಕೆಲ ವಿದ್ಯಾರ್ಥಿಗಳು ಕೂಡ ಪೆಡ್ಲೆರ್ ಗಳಾಗಿದ್ದು, ಅವರಿಂದ ಹೆಚ್ಚಿನ ಪ್ರಮಾಣದ ಮಾದಕ ದ್ರವ್ಯಗಳು ಪತ್ತೆಯಾಗಿತ್ತು. ಈ ಪ್ರಕರಣ ಬಗ್ಗೆ ನಾವು ವಿವಿಗೆ ಮಾಹಿತಿ ನೀಡಿದ್ದೆವು.

ಕಾಲೇಜು ಮತ್ತು ಹಾಸ್ಟೆಲ್ ಆವರಣದಲ್ಲಿ ಡ್ರಗ್ಸ್ ವ್ಯವಹಾರ ನಡೆದ ಬಗ್ಗೆ ವಿದ್ಯಾರ್ಥಿಗಳನ್ನು ಗುರುತಿಸಿ ಪಟ್ಟಿ ನೀಡಿದ್ದೇವೆ. ಟೆಸ್ಟಿಂಗ್ ಮೂಲಕ ಸಾಬೀತಾಗಿರುವ ಪ್ರಕರಣಗಳ ವಿವರ ಕೂಡ ವಿವಿಗೆ ನೀಡಿದ್ದೇವೆ. ಮಣಿಪಾಲ ವಿವಿ ಈ ವಿಚಾರಗಳಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದೆ. ಇದೀಗ ಮಣಿಪಾಲ ವಿವಿ 42 ಮಂದಿಯನ್ನು ಅಮಾನತು ಮಾಡಿದೆ. ಈ ವಿಚಾರದಲ್ಲಿ ಪೊಲೀಸ್ ಇಲಾಖೆಯಾಗಲಿ ವಿವಿಯಾಗಲಿ ನಿರ್ಲಕ್ಷ ವಹಿಸುವುದಿಲ್ಲ ಅನ್ನೋ ಸಂದೇಶ ರವಾನೆಯಾಗಿದೆ ಎಂದರು.