ಮದ್ಯ ಖರೀದಿ ವಯೋಮಿತಿ 21 ರಿಂದ 18ಕ್ಕೆ ಇಳಿಸುವ ನಿರ್ಧಾರಕ್ಕೆ ಆಕ್ಷೇಪ.. ಹಿಂದಿನ ವ್ಯವಸ್ಥೆಯೇ ಮುಂದುವರಿಕೆ

46
firstsuddi

ಬೆಂಗಳೂರು : ರಾಜ್ಯದಲ್ಲಿ ಮದ್ಯ ಖರೀದಿ ವಯೋಮಾನವನ್ನು 21 ರಿಂದ 18 ವರ್ಷಕ್ಕೆ ಇಳಿಕೆ ಮಾಡಿ ಪರಿಷ್ಕರಿಸಿ ಹೊರಡಿಸಿದ್ದ ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಕೆ ಆಗಿದ್ದು, ಸದ್ಯ ಇರುವ ಹಳೆ ವ್ಯವಸ್ಥೆಯೇ ಮುಂದುವರಿಯಲಿದೆ ಎಂದು ಅಬಕಾರಿ ಸಚಿವ ಗೋಪಾಲಯ್ಯ ಸ್ಪಷ್ಟಪಡಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಗೋವಿಂದರಾಜು ಪ್ರಶ್ನೆಗೆ ಸಚಿವರು ಉತ್ತರಿಸಿದರು.

ಮದ್ಯ ಮಾರಾಟ ವಯೋಮಾನದ ಕುರಿತು ಜನವರಿ 9 ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಮದ್ಯ ಖರೀದಿಸುವವರ ವಯೋಮಿತಿ 21 ರಿಂದ 18 ಕ್ಕೆ ಇಳಿಸುವ ಪ್ರಸ್ತಾಪ ಮಾಡಲಾಗಿತ್ತು. ಆದರೆ ಇದಕ್ಕೆ ಅನೇಕ ಆಕ್ಷೇಪಣೆ ಬಂತು. ಹೀಗಾಗಿ ಸಮಿತಿ ರಚಿಸಿದ್ದು ಸದ್ಯ ಈಗ ಯಾವ ರೀತಿ ಇದೆಯೋ ಅದರಂತೆಯೇ ಮುಂದುವರಿಸಲು ಕ್ರಮ ವಹಿಸಲಾಗಿದೆ. ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟದ ಕುರಿತು ಅನೇಕ ಕಡೆ ದಿಟ್ಟ ಕ್ರಮ ವಹಿಸಿದೆ. ಮುಂದೆಯೂ ಅದೇ ರೀತಿ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.

ಈ ವರ್ಷ ಅಬಕಾರಿ ಇಲಾಖೆಗೆ ನಿಗದಿಪಡಿಸಿರುವ ಆರ್ಥಿಕ ಗುರಿಯನ್ನು ಇಲಾಖೆ ದಾಟಲಿದೆ. ಕಳೆದ 5 ವರ್ಷವೂ ಸತತವಾಗಿ ನಮಗೆ ನಿಗದಿಪಡಿಸಿರುವ ಗುರಿಯನ್ನು ದಾಟಿದ್ದೇವೆ. ಈ ಬಾರಿಯೂ ಗುರಿ ತಲುಪುವುದರಲ್ಲಿ ಹಿಂದೆ ಬೀಳಲ್ಲ. ನಮಗೆ ನಿಗದಿಪಡಿಸಿರುವ ಗುರಿ ತಲುಪಲು ಇಲಾಖೆ ಅಗತ್ಯ ಕ್ರಮ ವಹಿಸಲಿದೆ ಎಂದು ತಿಳಿಸಿದರು.