ಬೆಂಗಳೂರು : ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಆಮ್ ಆದ್ಮಿ ಪಕ್ಷ ತೊರೆದು ಇಂದು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು. ಪಕ್ಷದ ಶಾಲು ಹಾಕಿ, ಧ್ವಜ ನೀಡಿ ಭಾಸ್ಕರ್ ರಾವ್ ಅವರನ್ನು ನಳಿನ್ ಕುಮಾರ್ ಕಟೀಲ್ ಸ್ವಾಗತಿಸಿದರು. ಭಾಸ್ಕರ್ ರಾವ್ ಜೊತೆ ಅವರ ಬೆಂಬಲಿಗರು ಬಿಜೆಪಿ ಸೇರಿದರು.
ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಭಾಸ್ಕರ್ ರಾವ್, ಎಎಪಿ ಕರ್ನಾಟಕದಲ್ಲಿ ಬೆಳೆಯುತ್ತಿಲ್ಲ. ಅವರ ಕಾರ್ಯವೈಖರಿ ಶೈಲಿಯಿಂದ ಅದು ಸಾಧ್ಯವಾಗುತ್ತಿಲ್ಲ. ಈಗ ನಾನು ಸನಾತನ ಧರ್ಮದ ಪಕ್ಷ, ರಾಷ್ಟ್ರೀಯತೆಯನ್ನ ಅಳವಾಗಿ ಮೈಗೂಡಿಸಿಕೊಂಡಿರುವ ಬಿಜೆಪಿ ಸೇರಿದ್ದೇನೆ. ಬಾಲ್ಯದಿಂದಲೂ ಸನಾತನ ಧರ್ಮ, ರಾಷ್ಟ್ರೀಯತೆಗೆ ನಾನು ಬದ್ಧವಾಗಿದ್ದೇನೆ. ಹಾಗಾಗಿ ನಾನು ಬಿಜೆಪಿ ಸೇರ್ಪಡೆ ಆಗಿದ್ದೇನೆ ಎಂದು ತಿಳಿಸಿದರು.
ನನಗೆ ಈಗ 58 ವರ್ಷವಾಗಿದೆ. ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಒಂದು ಉತ್ತಮ ಪಕ್ಷಕ್ಕೆ ಸೇರಿ ಕೆಲಸ ಮಾಡಬೇಕು ಎಂದು ನಿರ್ಧರಿಸಿದೆ. ಭಾರತ ಸಮೃದ್ಧವಾಗಿ ಗಟ್ಟಿಯಾಗಬೇಕು. ಬಿಜೆಪಿಯಿಂದ ಮಾತ್ರ ಅದು ಸಾಧ್ಯ. ಬೇರೆ ಯಾವ ಪಕ್ಷಗಳಿಂದಲೂ ಸಾಧ್ಯವಿಲ್ಲ. ಇಲ್ಲಿ ಸಿಗುವ ಅವಕಾಶ ನೋಡಿ ಖುಷಿ ಆಗುತ್ತದೆ. ಇಲ್ಲಿ ಅತ್ಯಂತ ಅನುಭವಿ ರಾಜಕಾರಣಿಗಳು ಇದ್ದಾರೆ. ಅವರ ಮಾರ್ಗದರ್ಶನದಲ್ಲಿ ಪಕ್ಷದಲ್ಲಿ ಕೆಲಸ ಮಾಡಿಕೊಂಡು ಹೋಗ್ತೀನಿ ಎಂದು ಹೇಳಿದರು.










