ಶಾಲಾ ಕೊಠಡಿಯಲ್ಲೇ ವಿಷ ಸೇವಿಸಿ ಶಿಕ್ಷಕಿ ಆತ್ಮಹತ್ಯೆ…

75
firstsuddi

ವಿಜಯನಗರ: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಶಿಕ್ಷಕಿಯೊಬ್ಬರು ಶಾಲಾ ಕೊಠಡಿಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹೂವಿನಹಡಗಲಿ ಪಟ್ಟಣದಲ್ಲಿ ನಡೆದಿದೆ.

ಬಸಮ್ಮ ಅಲಿಯಾಸ್ ರೂಪಾ (34) ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿ. ಇವರು ಹಡಗಲಿಯ ನ್ಯಾಷನಲ್ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. 10 ವರ್ಷಗಳ ಹಿಂದೆ ಬಸಮ್ಮ ಹಾಗೂ ಅರ್ಜುನ್ ಪರಶೆಟ್ಟಿ ಪ್ರೀತಿಸಿ ಮದುವೆಯಾಗಿದ್ದರು. ಪತಿ ಹಾಗೂ ಆತನ ಕುಟುಂಬದವರಿಂದ ರೂಪಾಗೆ ವರದಕ್ಷಿಣೆ ಕಿರುಕುಳ ನೀಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.

ನ್ಯಾಷನಲ್ ಶಾಲೆ ಅರ್ಜುನ್ ಕುಟುಂಬದ ಒಡೆತನಕ್ಕೆ ಸೇರಿದ್ದಾಗಿದೆ. ಗಂಡ-ಹೆಂಡತಿ ಇಬ್ಬರೂ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಪತಿ ಮನೆಯವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರಿಂದ ಬೇಸತ್ತಿದ್ದರು. ನಿನ್ನೆ ಪರೀಕ್ಷೆ ಕೆಲಸದ ನೆಪದಲ್ಲಿ ಶಾಲೆಗೆ ಬಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪತಿ ಅರ್ಜುನ್ ಪರಶೆಟ್ಟಿ, ಅತ್ತೆ ಅಂಬಿಕಾ ಪರಶೆಟ್ಟಿ, ನಾದಿನಿ ಸಂಗೀತಾ ಸೇರಿದಂತೆ 6 ಜನರ ವಿರುದ್ಧ ಹೂವಿನಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾವಿಗೂ ಮುನ್ನ ರೂಪಾ ಡೆತ್ ನೋಟ್ ಬರೆದಿಟ್ಟು, ಡೆತ್ ನೋಟ್ ಆಧರಿಸಿ ಪೊಲೀಸರು ತನಿಖೆ ನಡೆಸಿದ್ದಾರೆ.