ಚಿಕ್ಕಮಗಳೂರು : ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾರತ ಸೇವಾದಳದ ಪಾತ್ರ ಅತ್ಯಂತ ಮಹತ್ವವಾದದ್ದು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಜಗದೀಶಾಚಾರ್ ಹೇಳಿದರು.
ಭಾರತ ಸೇವಾದಳದ ಜ್ಞಾನಜ್ಯೋತಿ ಘಟಕ ನಗರದ ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಇಂದು ಏರ್ಪಡಿಸಿದ್ದ ಸೇವಾದಳ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭಾರತ ಸೇವಾದಳಕ್ಕೆ ನೂರಾರು ವರ್ಷದ ಇತಿಹಾಸವಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ನಾ.ಸು.ಹರ್ಡೀಕರ್ ಅವರು ಭಾರತ ಸೇವಾದಳವನ್ನು ಸ್ಥಾಪಿಸಿ ಸಹಸ್ರ ಸಂಖ್ಯೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ರೂಪಿಸಿದ ಕಾರಣ ಬ್ರಿಟಿಷರನ್ನು ಮಣಿಸಲು ಸಾಧ್ಯವಾಯಿತು ಎಂದರು.
ಮಕ್ಕಳು ಮತ್ತು ಯುವ ಜನತೆಯಲ್ಲಿ ದೇಶಪ್ರೇಮ, ರಾಷ್ಟ್ರಭಕ್ತಿ, ಶಿಸ್ತು ಮತ್ತು ಸೇವಾ ಮನೋಭಾವವನ್ನು ಬೆಳೆಸಲು ಭಾರತ ಸೇವಾದಳ ಸಹಕಾರಿ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಾರತ ಸೇವಾದಳದ ತಾಲೂಕು ಅಧ್ಯಕ್ಷ ಶಂಕರ್, ಸೇವಾದಳದ ಇತಿಹಾಸವನ್ನು ವಿವರಿಸಿ ಎಲ್ಲಾ ಶಾಲೆಗಳಲ್ಲೂ ಸೇವಾದಳದ ಶಾಖೆಗಳನ್ನು ತೆರೆಯಬೇಕು ಎಂದು ಮನವಿ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸೇವಾದಳದ ತಾಲೂಕು ಸಂಘಟಕ ಎಸ್.ಇ. ಲೋಕೇಶ್ವರಾಚಾರ್ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಮತ್ತು ಪರೀಕ್ಷೆಗಳನ್ನು ನಡೆಸಲಿದ್ದು, ವಿಜೇತರಿಗೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು ಎಂದು ಹೇಳಿದರು.
ಭಾರತ ಸೇವಾದಳದ ತಾಲೂಕು ಕಾರ್ಯದರ್ಶಿ ಮಹೇಶಪ್ಪ, ನಿರ್ದೇಶಕ ಕಾಳಯ್ಯ, ಪಶು ವೈದ್ಯ ಇಲಾಖೆ ನಿವೃತ್ತ ಅಧಿಕಾರಿ ರಾಮಚಂದ್ರಮೂರ್ತಿ, ಶಿಕ್ಷಕರಾದ ನಾಗರಾಜ್, ನಾಗವೇಣಿ, ಸಾವಿತ್ರಿ, ಜಯಂತಿ ಉಪಸ್ಥಿತರಿದ್ದರು.










