ಉದ್ಯೋಗಕ್ಕಾಗಿ ಭೂಮಿ ಹಗರಣ : ಲಾಲು ಪ್ರಸಾದ್ ಯಾದವ್, ಪತ್ನಿ ಮತ್ತು ಪುತ್ರಿಗೆ ಜಾಮೀನು…

47
firstsuddi

ನವದೆಹಲಿ : ಉದ್ಯೋಗಕ್ಕಾಗಿ ಭೂಮಿ ಹಗರಣ ಪ್ರಕರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್, ಅವರ ಪತ್ನಿ ರಾಬ್ರಿ ದೇವಿ, ಅವರ ಮಗಳು ಮಿಸಾ ಭಾರತಿ ಮತ್ತು ಇತರ ಆರೋಪಿಗಳಿಗೆ ದೆಹಲಿ ವಿಶೇಷ ನ್ಯಾಯಾಲಯ ಇಂದು ಜಾಮೀನು ನೀಡಿದ್ದು, ಪ್ರತಿ ಆರೋಪಿಗೆ 50,000 ರೂ.ಗಳ ವೈಯಕ್ತಿಕ ಜಾಮೀನು ಬಾಂಡ್ ಮತ್ತು ಅಷ್ಟೇ ಮೊತ್ತದ ಶ್ಯೂರಿಟಿ ಒದಗಿಸುವಂತೆ ನಿರ್ದೇಶನ ನೀಡಿದೆ.

ಫೆಬ್ರವರಿ 27 ರಂದು ರೂಸ್ ಅವೆನ್ಯೂ ನ್ಯಾಯಾಲಯವು ಯಾದವ್ ಸೇರಿದಂತೆ ಇತರ ಆರೋಪಿಗಳಿಗೆ ಸಮನ್ಸ್ ಜಾರಿಗೊಳಿಸಿ ಮಾರ್ಚ್ 15 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿತ್ತು. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಸಿಬಿಐ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಧೀಶರಾದ ಗೀತಾಂಜಲಿ ಗೋಯೆಲ್ ಅವರ ಮುಂದೆ ಕುಟುಂಬದವರು ಹಾಜರಾದರು.

ಈ ಪ್ರಕರಣದಲ್ಲಿ ತನಿಖಾ ಸಂಸ್ಥೆ ತನ್ನ ದೋಷಾರೋಪ ಪಟ್ಟಿ ಸಲ್ಲಿಸಿದೆ ಎಂದು ಗಮನಿಸಿದ ನಂತರ ನ್ಯಾಯಾಲಯವು ಅವರ ಜಾಮೀನು ಅರ್ಜಿಗಳನ್ನು ಅಂಗೀಕರಿಸಿದೆ. ಲಾಲು ಪ್ರಸಾದ್ ಅವರು 2004 ಮತ್ತು 2009 ರ ನಡುವೆ ರೈಲ್ವೆ ಸಚಿವರಾಗಿದ್ದಾಗ ರೈಲ್ವೆಯಲ್ಲಿ ನಡೆದ ನೇಮಕಾತಿಗಳಲ್ಲಿ ಅಕ್ರಮ ನಡೆದಿದೆ ಎಂದು ಸಿಬಿಐ ಆರೋಪಿಸಿದೆ.

ಸಿಬಿಐ ತನ್ನ ಚಾರ್ಜ್ ಶೀಟ್ ನಲ್ಲಿ, ರೈಲ್ವೆಯಲ್ಲಿ ಅನಿಯಮಿತ ನೇಮಕಾತಿಗಳನ್ನು ಮಾಡಲಾಗಿದೆ. ನೇಮಕಾತಿಗಾಗಿ ಭಾರತೀಯ ರೈಲ್ವೆಯ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದೆ. ರೈಲ್ವೆಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಅಭ್ಯರ್ಥಿಗಳು ಲಾಲು ಪ್ರಸಾದ್ ಅವರ ಕುಟುಂಬ ಸದಸ್ಯರಿಗೆ ಕಡಿಮೆ ಬೆಲೆಗೆ ಭೂಮಿಯನ್ನು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದೆ.