ಜಗತ್ತಿನ ಎಲ್ಲಾ ದೇಶಗಳ ಸಂಸ್ಕೃತಿಯ ಮೂಲ ಬೇರು ಜಾನಪದ : ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ.

69
firstsuddi

ಚಿಕ್ಕಮಗಳೂರು: ಜಗತ್ತಿನ ಎಲ್ಲಾ ದೇಶಗಳ ಸಂಸ್ಕೃತಿಯ ಮೂಲ ಬೇರು ಜಾನಪದ ಎಂದು ಹರಿಹರಪುರ ಶ್ರೀಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಕರ್ನಾಟಕ ಜಾನಪದ ಪರಿಷತ್ತಿನ ಹೋಬಳಿ ಘಟಕ,ಹರಿಹರಪುರದ ಶ್ರೀಮಠದಲ್ಲಿ ನಿನ್ನೆ ಆಯೋಜಿಸಿದ್ದ ಪದಾಧಿಕಾರಿಗಳ ಪದಗ್ರಹಣ, ಜಾನಪದ ಅಂದು-ಇಂದು ವಿಚಾರ ಸಂಕಿರಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಾಚನ ನೀಡಿದರು.
ಜಾನಪದಕ್ಕೆ 9 ಲಕ್ಷ ವರ್ಷಗಳ ಇತಿಹಾಸವಿದೆ. ತ್ರೇತಾಯುಗ, ದ್ವಾಪರಯುಗದ ಕಾಲದಿಂದಲೂ ನಮ್ಮ ಜಾನಪದರು ಜನಪದಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಪೀಳಿಗೆಯಿಂದ ಪೀಳಿಗೆಗೆ ಕೊಂಡೊಯ್ಯುತ್ತ ಬಂದಿದ್ದಾರೆ ಎಂದರು.

ಯಾವುದೇ ದೇಶದ ಶ್ರೀಮಂತಿಕೆಯನ್ನು ಅಳೆಯುವುದು.ಆ ದೇಶದ ಸಂಸ್ಕೃತಿಯಿಂದ ಮಾತ್ರ, ಆ ಸಂಸ್ಕೃತಿಯ ಭದ್ರ ಬುನಾದಿ ಜನಪದವಾಗಿದೆ ಎಂದು ಹೇಳಿದರು.

ಭಾರತದ ಸಂಸ್ಕೃತಿಯ ಮೂಲ ಬೇರು ಜಾನಪದವಾಗಿದೆ. ನಮ್ಮ ತಾಯಂದಿರುವ ಮೂರು ಗಂಟೆಯೊಳಗೆ ಲಾವಣಿ ಮೂಲಕ ರಾಮಾಯಣದ ಕಥೆಯನ್ನು ಸಂಪೂರ್ಣವಾಗಿ ಕಣ್ಣಿಗೆ ಕಟ್ಟುವಂತೆ ನಾಟಿ ಮಾಡುವಾಗ ಹೇಳುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದರು.

ಆಧುನಿಕತೆಯ ಭರದಲ್ಲಿ ತಾತ್ಸಾರಕ್ಕೆ ಒಳಗಾಗಿರುವ ಜಾನಪದ ದತ್ತ ಜನರನ್ನು ಮತ್ತೆ ಆಕರ್ಷಿಸಬೇಕು. ಆ ಮೂಲಕ ಅದನ್ನು ಮುಂದಿನ ತಲೆಮಾರಿಗೆ ಉಳಿಸಬೇಕು ಎಂದ ಸ್ವಾಮೀಜಿ, ಈ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಘಟಕ ಹರಿಹರಪುರ ಹೋಬಳಿ ಘಟಕವನ್ನು ಸ್ಥಾಪಿಸಿರುವುದು ಶ್ಲಾಘನೀಯ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್, ಕೊಪ್ಪ ತಾಲೂಕಿನಲ್ಲಿ ಬಹಳಷ್ಟು ಪ್ರತಿಭಾವಂತ ಜಾನಪದ ಕಲಾವಿದರಿದ್ದು, ಅವರು ತಾವು ಕಲಿತಕಲೆಯನ್ನು ಮುಂದಿನ ತಲೆಮಾರಿಗೂ ಕಲಿಸುವ ಮೂಲಕ ಅದನ್ನು ಉಳಿಸಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ಹಿರಿಯ ವೀರಗಾಸೆ ಕಲಾವಿದ ಡಾ.ಮಾಳೇನಹಳ್ಳಿ ಬಸಪ್ಪ ವೀರಗಾಸೆ ವಡಪನ್ನು ಮನೋಜ್ಞವಾಗಿ ವಾಚಿಸಿದರು. ಕಲಾವಿದೆ ಮನೋನ್ಮಣಿ ಜಾನಪದ ಅಂದು-ಇಂದು ವಿಷಯ ಕುರಿತು ಉಪನ್ಯಾಸ ನೀಡಿದರು.

ಹೋಬಳಿ ಘಟಕದ ನೂತನ ಪದಾಧಿಕಾರಿಗಳಿಗೆ ಸಮಾರಂಭದಲ್ಲಿ ಪ್ರತಿಜ್ಞಾವಿಧಿಯನ್ನು ಭೋದಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಐವರು ಸಾಧಕರನ್ನು ಸನ್ಮಾನಿಸಲಾಯಿತು.

ಸಮಾರಂಭಕ್ಕೆ ಮುನ್ನ ವಿವಿಧ ಜಾನಪದ ಕಲಾತಂಡಗಳ ನಡುವೆ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು. ಹೆಚ್.ಎಸ್.ಕಳಸಪ್ಪ, ಹೋಬಳಿ ಘಟಕದ ನಿಯೋಜಿತ ಅಧ್ಯಕ್ಷೆ ತಮನ್ನಾ, ಕೊಪ್ಪ ತಾಲೂಕು ಅಧ್ಯಕ್ಷ ಪೂರ್ಣೇಶ್, ಗೌರವಾಧ್ಯಕ್ಷ ದಿವಾಕರ ಭಟ್, ಪದಾಧಿಕಾರಿಗಳಾದ ಚಿಕ್ಕನೆಲ್ಲೂರುಜಯಣ್ಣ, ಅಂಬುಜಾ, ನಾಗಲಕ್ಷ್ಮೀ, ಸುಮ, ಮಂಜುಳಾ, ನಾಗರಾಜ್, ಗುರುಮೂರ್ತಿ ಉಪಸ್ಥಿತರಿದ್ದರು.