ಪ್ರಧಾನಿ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ; ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ, ಜಾಮೀನು ಮಂಜೂರು…

61
firstsuddi

ಗಾಂಧಿನಗರ: 2019ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಗುಜರಾತ್‍ನ ಸೂರತ್ ಜಿಲ್ಲಾ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಈ ಬಗ್ಗೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ಪರಿಗಣಿಸಿತ್ತು. ಇನ್ನೂ ಇದೇ ಪ್ರಕರಣದಲ್ಲಿ ರಾಹುಲ್‍ಗೆ ಜಾಮೀನು ಕೂಡ ಮಂಜೂರು ಮಾಡಿದೆ. ಶಿಕ್ಷೆ ವಿಧಿಸಿದ ಬೆನ್ನಲ್ಲೇ ರಾಹುಲ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದು, ಸೂರತ್ ಕೋರ್ಟ್ 30 ದಿನಗಳ ಜಾಮೀನು ಮಂಜೂರು ಮಾಡಿದ್ದು ರಾಹುಲ್ ಗಾಂಧಿಗೆ ಬಿಗ್ ರಿಲೀಫ್ ಸಿಕ್ಕಿದೆ.

ಕಳೆದ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕರ್ನಾಟಕದ ಕೋಲಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಓರ್ವ ಕಳ್ಳ ಎಂದು ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ ಇವೆರೆಲ್ಲರ ಸರ್ ನೇಮ್ ಒಂದೇ ಆಗಿದ್ದು, ಈ ಎಲ್ಲಾ ಕಳ್ಳರು ದೇಶವನ್ನು ಲೂಟಿ ಮಾಡಿದ್ದಾರೆ ಎಂದು ರಾಹುಲ್ ಹರಿಹಾಯ್ದಿದ್ದರು.

ಈ ಹೇಳಿಕೆಯನ್ನು ಆಧಾರಿಸಿ ಬಿಜೆಪಿ ಶಾಸಕ ಮತ್ತು ಗುಜರಾತ್ ಮಾಜಿ ಸಚಿವ ಪೂರ್ಣೇಶ್ ಮೋದಿ ಅವರು ಕ್ರಿಮಿನಲ್ ಮಾನಹಾನಿ ದೂರು ದಾಖಲಿಸಿದ್ದರು.