ಭುವನೇಶ್ವರ್ : ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್ಸಿ) ಮೂಲಕ ನೇಮಕಗೊಂಡಿರುವ ಅಧಿಕಾರಿಗಳು ಡಕಾಯಿತರು ಎಂದು ಕೇಂದ್ರ ಸಚಿವ ಬಿಶ್ವೇಶ್ವರ್ ತುಡು ವಿವಾದಾತ್ಮಕ ಹೇಳಿಕೆ ನೀಡಿದ್ದು, ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಬಾಲಸೋರ್ ಜಿಲ್ಲೆಯ ಬಲಿಪಾಲ್ ನಲ್ಲಿರುವ ಸರ್ಕಾರಿ ಶಾಲೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಯುಪಿಎಸ್ಸಿ ಮೂಲಕ ನೇಮಕಗೊಂಡ ಅಧಿಕಾರಿಗಳು ಅತ್ಯಂತ ಜ್ಞಾನವುಳ್ಳ ವ್ಯಕ್ತಿಗಳು ಮತ್ತು ಯಾವಾಗಲೂ ಉನ್ನತ ಹುದ್ದೆಗಳಲ್ಲಿರುತ್ತಾರೆ ಎಂಬ ಕಲ್ಪನೆ ನನಗಿತ್ತು. ಆದರೆ ಈ ಯುಪಿಎಸ್ಸಿ ಅರ್ಹತೆ ಪಡೆದವರಲ್ಲಿ ಹೆಚ್ಚಿನವರು ಡಕಾಯಿತರು ಎಂದು ನಾನು ಭಾವಿಸುತ್ತೇನೆ. ಆದರೆ ಎಲ್ಲ ಅಧಿಕಾರಿಗಳು ಡಕಾಯಿತರು ಎಂದು ನಾನು ಹೇಳುವುದಿಲ್ಲ. ಆದರೆ ಅವರಲ್ಲಿ ಕೆಲವರು ಕಳ್ಳರು ಇದ್ದಾರೆ ಎಂದು ಹೇಳಿದ್ದಾರೆ.
ಕೋಳಿ ಕಳ್ಳನಿಗೆ ಶಿಕ್ಷೆಯಾಗಬಹುದಾದರೂ, ಖನಿಜ ಮಾಫಿಯಾ ನಡೆಸುವ ಅಧಿಕಾರಿಯನ್ನು ಮುಟ್ಟಲು ಸಾಧ್ಯವಿಲ್ಲ, ಏಕೆಂದರೆ ಈ ವ್ಯವಸ್ಥೆ ಅವರನ್ನು ರಕ್ಷಣೆ ಮಾಡುತ್ತದೆ ಎಂದರು.
ದೆಹಲಿರುವ ನನ್ನ ಮನೆಯ ಹಿಂದೆ ಯುಪಿಎಸ್ಸಿ ಕಚೇರಿ ಇದೆ, ಈ ಬಗ್ಗೆ ನನಗೆ ತುಂಬಾ ಗೌರವ ಇತ್ತು, ಆದರೆ ಇದೀಗ ಬದಲಾಗಿದೆ. ಇಂತಹ ವಿದ್ಯಾವಂತರು ಇದ್ದರೆ ನಮ್ಮ ಸಮಾಜ ಏಕೆ ಭ್ರಷ್ಟಾಚಾರ ಮತ್ತು ಅನ್ಯಾಯದಲ್ಲಿ ಮುಳುಗಿದೆ? ಇದಕ್ಕೆ ಕಾರಣ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿನ ನೈತಿಕತೆಯ ಕೊರತೆ. ನಮ್ಮಲ್ಲಿ ಆಧ್ಯಾತ್ಮಿಕ ಶಿಕ್ಷಣ ಮತ್ತು ಆಲೋಚನೆಗಳ ಕೊರತೆ. ನಮ್ಮಲ್ಲಿ ಆಧ್ಯಾತ್ಮಿಕ ಶಿಕ್ಷಣ ಮತ್ತು ಆಲೋಚನೆಗಳ ಕೊರತೆಯಿದೆ ಎಂದು ಬೇಸರ ವ್ಯಕ್ತಪಡಿಸಿದರು.










