ಇಂದು ಡಾ.ರಾಜ್ ಕುಮಾರ್ ಅವರ 17ನೇ ಪುಣ್ಯತಿಥಿ. ಬೆಂಗಳೂರಿನ ಕಂಠೀರವ ಸ್ಟುಡಿಯೋ ಬಳಿಯ ಸಮಾಧಿಗೆ ರಾಘವೇಂದ್ರ ರಾಜ್ ಕುಮಾರ್, ಯುವರಾಜ್ ಕುಮಾರ್, ಶಿವರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜ್ ಕುಮಾರ್ ಸೇರಿದಂತೆ ಡಾ.ರಾಜ್ ಕುಟುಂಬದ ಅನೇಕ ಸದಸ್ಯರು ಹಾಗೂ ಅಭಿಮಾನಿಗಳು ಸ್ಮಾರಕಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.
ಡಾ.ರಾಜ್ ಕುಮಾರ್ ಹುಟ್ಟಿದ ದಿನ (ಏಪ್ರಿಲ್ 24)ಕ್ಕೆ 12 ದಿನ ಇರುವಾಗಲೇ ಅವರು ನಿಧನ ಹೊಂದಿದರು. 2006ರ ಏ.12ರಂದು ಅವರು ಇಹಲೋಕ ತ್ಯಜಿಸಿದರು. ರಾಜ್ ಕುಮಾರ್ ಮೃತಪಡುವಾಗ ಅವರಿಗೆ 76 ವರ್ಷ ವಯಸ್ಸಾಗಿತ್ತು. ಅವರು 5 ದಶಕಗಳ ಕಾಲ ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡಿದ್ದಾರೆ. ಅವರು ನಮ್ಮನ್ನು ಅಗಲಿ ಇಂದಿಗೆ (ಏಪ್ರಿಲ್ 12) 17 ವರ್ಷ. ರಾಜ್ ಕುಮಾರ್ ಹಾಕಿಕೊಟ್ಟ ಆದರ್ಶ, ಅವರು ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಹಾಗೂ ನೂರಾರು ಪಾತ್ರಗಳಿಂದ ಅವರು ಎಂದಿಗೂ ಶಾಶ್ವತ.
ಇಂದು ಅನೇಕರು ಅಣ್ಣಾವ್ರ ನೆನಪಿನಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಸ್ಮಾರಕದ ಮುಂದೆ ಅಭಿಮಾನಿಗಳು ರಕ್ತದಾನ, ಅನ್ನದಾನ ಶಿಬಿರಗಳನ್ನು ಆಯೋಜನೆ ಮಾಡಿದ್ದರು. ರಾಜ್ ಕುಮಾರ್ ಅವರು ಕಣ್ಣುಗಳನ್ನು ದಾನ ಮಾಡಿದ್ದರು. ಹೀಗಾಗಿ, ಇಂದು ಅನೇಕರು ಕಣ್ಣುಗಳನ್ನು ದಾನ ಮಾಡಲು ನೋಂದಣಿ ಮಾಡಿಸುತ್ತಿದ್ದಾರೆ.
ರಾಜ್ ಕುಮಾರ್ ಅವರ ಪುಣ್ಯತಿಥಿಗಾಗಿ ಪುನೀತ್ ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಸಮಾಧಿಗೂ ಹೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು.










