ಮೈಸೂರು : ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ವರುಣಾ ಕ್ಷೇತ್ರದಿಂದ ಸ್ಪರ್ಧಿಸೋಕೆ ಸಚಿವ ವಿ ಸೋಮಣ್ಣ ಅವರನ್ನು ಬಿಜೆಪಿ ಹೈಕಮಾಂಡ್ ಕಣಕ್ಕಿಳಿಸಿದೆ. ವರುಣಾದಲ್ಲಿ ಅಭ್ಯರ್ಥಿ ಘೋಷಣೆಯಾದಾಗಿನಿಂದ ವಿ ಸೋಮಣ್ಣ ಅವರು ವರುಣಾದಲ್ಲಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಸೋಮಣ್ಣ ಪರ ಸಂಸದ ಪ್ರತಾಪ್ ಸಿಂಹ ಕೂಡ ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ಇಂದು ಮಾತ್ರ ಪ್ರತಾಪ್ ಸಿಂಹಗೆ ಮತದಾರರು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ವಿ ಸೋಮಣ್ಣ ಅವರಿಗೆ ಮೊನ್ನೆ ಲಲಿತಾದ್ರಿಪುರ ಗ್ರಾಮದಲ್ಲಿ ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದರು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಏನು ಅಭಿವೃದ್ಧಿ ಮಾಡಿದ್ದೀರಿ? ಏನು ಕೊಡುಗೆ ಕೊಟ್ಟಿದ್ದೀರಿ ಎಂದು ಈಗ ಮತ ಕೇಳಲು ಬಂದಿದ್ದೀರಿ ಎಂದು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದರು. ಇದರಿಂದ ಸೋಮಣ್ಣ ಹಾಗೂ ಪ್ರತಾಪ್ ಸಿಂಹ ಮುಜುಗರ ಅನುಭವಿಸಿದ್ದರು. ಇದರ ಬೆನ್ನಲ್ಲೇ ಇದೀಗ ಇಂದು ಮತ್ತೆ ಸೋಮಣ್ಣ ಪರ ಮತಯಾಚನೆಗೆ ತೆರಳಿದ್ದ ಸಂಸದ ತಾಪ್ ಸಿಂಹಗೆ ಸ್ಥಳೀಯ ನಿವಾಸಿಗಳು ಕ್ಲಾಸ್ ತೆಗೆದುಕೊಂಡಿರುವ ಪ್ರಸಂಗ ನಡೆದಿದೆ.
ಅಕ್ಕಿ ನಮ್ಮದು, ಚೀಲ ಮಾತ್ರ ಸಿದ್ದರಾಮಯ್ಯ ಅವ್ರದ್ದು ಅಂತೀರಾ, ಬಿಜೆಪಿಯವರು ಯಾಕೆ ಅಕ್ಕಿ ಕಡಿಮೆ ಕೊಡ್ತೀದ್ದೀರಾ? ಮೈಸೂರಿಗೆ ಸಿದ್ದರಾಮಯ್ಯ ಅವರ ಕೊಡುಗೆ ಏನು ಅಂತಾ ಪ್ರಶ್ನೆ ಮಾಡ್ತೀರಾ? ಸಿದ್ದರಾಮಯ್ಯ ಅವ್ರ ಹತ್ರ ಕುಳಿತುಕೊಳ್ಳಿ ಗೊತ್ತಾಗುತ್ತೆ. ರಸ್ತೆಗಳ ರಾಜ ಅಂಥ ಮಹದೇವಪ್ಪಗೆ ಬಿರುದು ಕೊಡುತ್ತೀರಾ, ಅದೇ ಮಹದೇವಪ್ಪ ವಿರುದ್ಧ ಮಾತನಾಡುತ್ತೀರಾ ಎಂದು ಪ್ರತಾಪ್ ಸಿಂಹಗೆ ಸ್ಥಳೀಯ ನಿವಾಸಿಗಳು ಪ್ರಶ್ನಿಸಿ ತರಾಟೆ ತೆಗೆದುಕೊಂಡರು.
ಇಷ್ಟು ಮಾತ್ರವಲ್ಲದೇ, ನೀವು ಬಿಜೆಪಿಯವರು ಅಂಬೇಡ್ಕರ್ ಬರೆದ ಸಂವಿಧಾನವನ್ನೇ ಬದಲು ಮಾಡ್ತೀನಿ ಅಂತೀರಾ..? ಸಂಸದ ಶ್ರೀನಿವಾಸ್ ಪ್ರಸಾದ್ ಇದುವರೆಗೂ ಕ್ಷೇತ್ರಕ್ಕೆ ಬಂದೇ ಇಲ್ಲ. ಮಹದೇವಪ್ಪ ವಿರುದ್ಧ ಮಾತಾಡ್ತೀರಾ? ರಸ್ತೆಗಳ ರಾಜ ಅಂತೀರಾ, ಬರೀ ಸುಳ್ಳು ಹೇಳ್ತೀರಾ ನಿಮ್ಮ ಕೊಡುಗೆ ಏನ್ರೀ.? ಎಂದು ಕ್ಲಾಸ್ ತೆಗೆದುಕೊಂಡರು.
ಮತದಾರರ ಆಕ್ರೋಶಕ್ಕೆ ಗುರಿಯಾದ ಪ್ರತಾಪ್ ಸಿಂಹ ಪ್ರತ್ಯುತ್ತರ ಕೊಡಲಾಗದೆ ಸುಮ್ಮನಾದರು. ಬಳಿಕ ಅಲ್ಲಿಂದ ತೆರಳಿ ಮತ್ತೊಂದು ಕಡೆ ಪ್ರಚಾರ ಕಾರ್ಯವನ್ನು ಮುಂದುವರೆಸಿದರು.








