ಚಿಕ್ಕಮಗಳೂರು : ಚುನಾವಣಾ ಪ್ರಚಾರ ನಡೆಸಿದ ಬಿಎಸ್‍ಪಿ ಅಭ್ಯರ್ಥಿ ಕೆ.ಬಿ.ಸುಧಾ

61
firstsuddi

ಚಿಕ್ಕಮಗಳೂರು : ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಕೆ.ಬಿ.ಸುಧಾ ಅವರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಇಂದು ಬಿರುಸಿನ ಚುನಾವಣಾ ಪ್ರಚಾರ ನಡೆಸಿದರು.

ಚುನಾವಣಾ ಪ್ರಚಾರಕ್ಕಾಗಿಯೇ ವಿಶೇಷವಾಗಿ ಸಜ್ಜುಗೊಳಿಸಲಾದ ಬಹುಜನವಾಹಿನಿ ವಾಹನದಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು ಮತ್ತು ಅಭಿಮಾನಿಗಳೊಂದಿಗೆ ತೆರಳಿ ತಾಲೂಕಿನ ಹಿರೇಮಗಳೂರು, ಕರ್ತಿಕೆರೆ, ಬಿಳೇಕಲ್ಲು ಮತ್ತು ಕುರುವಂಗಿಯಲ್ಲಿ ಮತಯಾಚನೆ ಮಾಡಿದರು.

ಗ್ರಾಮಗಳ ಮನೆ ಮನೆಗಳಿಗೆ ತೆರಳಿ ಉಜ್ವಲ ಭವಿಷ್ಯಕ್ಕಾಗಿ ಈ ಬಾರಿ ಬದಲಾವಣೆ ತರುವಂತೆ ಬಹುಜನ ಸಮಾಜ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು,ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ಇಡಿಯಾಗಿ ಜಾರಿಯಾಗಬೇಕಾದರೆ ಬಿಎಸ್‍ಪಿ ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಬೇಕು ಎಂದರು.

ಇದುವರೆಗೆ ಅಧಿಕಾರ ನಡೆಸಿರುವ ಎಲ್ಲಾ ಪಕ್ಷಗಳೂ ತಮ್ಮ ಲಾಭಕ್ಕಾಗಿ ತಮಗೆ ಬೇಕಾದಂತೆ ಸಂವಿಧಾನವನ್ನು ತಿರುಚಿವೆ. ಇದರಿಂದಾಗಿ ಸಂವಿಧಾನ ಶಿಲ್ಪಿಯ ಮೂಲ ಆಶಯಕ್ಕೆ ಧಕ್ಕೆಯಾಗಿದೆ ಎಂದು ಹೇಳಿದರು.

ಸಂವಿಧಾನವನ್ನುಇಡಿಯಾಗಿ ಜಾರಿಗೊಳಿಸಲು ಬಹುಜನ ಸಮಾಜ ಪಕ್ಷದಿಂದ ಮಾತ್ರ ಸಾಧ್ಯ. ಹಾಗಾಗಿ ಮತದಾರರು ಬಿಎಸ್ಪಿಯನ್ನು ಚುನಾಯಿಸಬೇಕು ಎಂದು ಕೋರಿದರು.

ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ, ಕೆಳ ವರ್ಗದ ಜನ ಮತದಾನದ ದಿನವನ್ನು ತಮ್ಮ ವಿಮೋಚನೆಯ ದಿನ ಎಂದು ಭಾವಿಸಬೇಕು.ತಮ್ಮ ಏಳಿಗೆ ಮತ್ತು ಉಜ್ವಲ ಭವಿಷ್ಯಕ್ಕಾಗಿ ಬಹುಜನ ಸಮಾಜ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡುವ ಸಂಕಲ್ಪ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕೆಳ ವರ್ಗದ ಜನ ಈ ಬಾರಿ ಬಿಎಸ್ಪಿಯನ್ನು ಗೆಲ್ಲಿಸುವ ಪ್ರತಿಜ್ಞೆ ಮಾಡಿದರೆ ಮೇ.13ರ ನಂತರ ರಾಜ್ಯದಲ್ಲಿ ಹೊಸ ಯುಗ ಆರಂಭವಾಗುತ್ತದೆ ಎಲ್ಲರೂ ಶಾಂತಿ, ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ ಎಂದರು.

ಬಿಎಸ್‍ಪಿ ಜಿಲ್ಲಾ ಉಪಾಧ್ಯಕ್ಷ ಕೆ.ಆರ್.ಗಂಗಾಧರ್, ಅಸೆಂಬ್ಲಿ ಸಂಯೋಜಕಿ ಕೆ.ಎಸ್. ಮಂಜುಳಾ, ಪಕ್ಷದ ಮುಖಂಡರಾದ ಜಯಚಂದ್ರ, ವಿಜಯಕುಮಾರ್, ಸಿದ್ದಯ್ಯ ಹಾಜರಿದ್ದರು.