ಕಲಬುರಗಿ: ಕಾಂಗ್ರೆಸ್ ಪ್ರಣಾಳಿಕೆಯನ್ನು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಸುಟ್ಟು ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಚುನಾವಣಾ ಪ್ರಚಾರದಲ್ಲಿ ಬಜರಂಗದಳ ನಿಷೇಧ ವಿಚಾರವಾಗಿ ಕಿಡಿಕಾರಿದರು. ಯುವಜನರಿಗೆ ಸ್ಫೂರ್ತಿ ತುಂಬುವ ಕೆಲಸವನ್ನು ಬಜರಂಗದಳ ಮಾಡುತ್ತಿದೆ. ಗೋಹತ್ಯೆ ತಡೆಯಲು ಮುಂದಾಗಿರುವ ಬಜರಂಗದಳವನ್ನು ಬ್ಯಾನ್ ಮಾಡ್ತಿರಾ? ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆಯನ್ನು ನಿಮ್ಮ ಎದುರೇ ಸುಟ್ಟು ಹಾಕುತ್ತಿದ್ದೇನೆ. ಕಾಂಗ್ರೆಸ್ ಬರೀ ಸುಳ್ಳಿನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಹೀಗಾಗಿ ಈ ಪ್ರಣಾಳಿಕೆಯಿಂದ ಯಾವ ಪ್ರಯೋಜನ ಇಲ್ಲ ಎಂದು ಕಿಡಿಕಾರಿದ್ದಾರೆ.
ಬಜರಂಗದಳ ಬ್ಯಾನ್ ಮಾಡುತ್ತೇನೆ ಎಂದು ಹೇಳಿದ್ದಕ್ಕೆ ಹಿಂದೂಗಳಿಗೆ ನೋವಾಗಿದೆ. ಕಾಂಗ್ರೆಸ್‍ನ ಮನಸ್ಥಿತಿ ರಾಜ್ಯದ ಜನರಿಗೆ ಗೊತ್ತಾಗಿದೆ. ಎಲ್ಲಾ ಮುಸ್ಲಿಮರು ಒಂದೇ ಥರ ಅಲ್ಲ. ಕೆಲ ಮುಸ್ಲಿಮರು ಕಾಂಗ್ರೆಸ್‍ನ ವಿರುದ್ಧವಾಗಿದ್ದಾರೆ. ಇದು ಮುಸ್ಲಿಂ ಲೀಗ್‍ನ ಪ್ರಣಾಳಿಕೆ, ಮಹ್ಮದ್ ಅಲಿ ಜಿನ್ನಾನ ಪ್ರಣಾಳಿಕೆಯಾಗಿದೆ. ಬಜರಂಗದಳ ಬ್ಯಾನ್ ಮಾಡಿ ಮುಸ್ಲಿಮರ ತುಷ್ಟಿಕರಣ ಮಾಡಲು ಕಾಂಗ್ರೆಸ್ ಹೊರಟಿದೆ ಎಂದ ಅವರು, ಎಲ್ಲಾ ರಾಷ್ಟ್ರಭಕ್ತ ನಾಗರಿಕರು ರಾಷ್ಟ್ರದ್ರೋಹಿ ಪ್ರಣಾಳಿಕೆ ಬಹಿಷ್ಕರಿಸಲು ಮನವಿ ಮಾಡಿದರು.
ಬಜರಂಗದಳ ಅಂದರೆ ಆಂಜನೇಯ. ಆಂಜನೇಯನ ಬಾಲಕ್ಕೆ ಬೆಂಕಿ ಹಚ್ಚಿದ್ದು ರಾವಣ. ಹೀಗಾಗಿ ಆಂಜನೇಯನ ಬಾಲಕ್ಕೆ ಬೆಂಕಿ ಹಚ್ಚಲು ಮುಂದಾಗಿರುವ ಕಾಂಗ್ರೆಸ್ ದೇಶದೆಲ್ಲೆಡೆ ಸರ್ವನಾಶವಾಗಲಿದೆ. ಈ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿಪಕ್ಷ ಸ್ಥಾನ ಕೂಡ ಕಳೆದುಕೊಳ್ಳಲಿದೆ ಎಂದು ಗುಡುಗಿದರು.










