ಗಾಂಧಿನಗರ: ಸೂರತ್ ನಲ್ಲಿ ವ್ಯಕ್ತಿಯೊಬ್ಬ ತನ್ನೊಂದಿಗೆ ಸಂಬಂಧ ಹೊಂದಿದ್ದ ಮಹಿಳೆಯ ಮೇಲೆ ಅತ್ಯಾಚಾರ ಮಾಡಿ ದೈಹಿಕವಾಗಿ ಹಲ್ಲೆ ನಡೆಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಆರೋಪಿಯನ್ನು ನಿಕುಂಜ್ ಕುಮಾರ್ ಅಮೃತ್ ಭಾಯ್ ಪಟೇಲ್ ಎಂದು ಗುರುತಿಸಲಾಗಿದೆ. ಈತನಿಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರೂ ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದಾರೆ. ಆದರೆ ಮದುವೆಯಾಗಿರುವ ಸತ್ಯವನ್ನು ಆತ ತನ್ನ ಗೆಳತಿಗೆ ಹೇಳಿರಲಿಲ್ಲ. ಕೆಲ ದಿನಗಳ ಬಳಿಕ ಆತನ ವೈವಾಹಿಕ ಸ್ಥಿತಿಯ ಬಗ್ಗೆ ಗೆಳತಿಗೆ ತಿಳಿದಾಗ, ಇಬ್ಬರ ಮಧ್ಯೆ ಜಗಳ ನಡೆದಿದೆ. ಅಲ್ಲದೆ ಯುವತಿ, ಈತನಿಂದ ದೂರವಿರಲು ನಿರ್ಧರಿಸಿದಳು ಎಂದು ಪೊಲೀಸರು ತಿಳಿಸಿದ್ದಾರೆ.
ಆಕೆಯ ನಿರ್ಧಾರದಿಂದ ಕೋಪಗೊಂಡ ಪಟೇಲ್, ತನ್ನ ಗೆಳತಿಯನ್ನು ಕೇಬಲ್ ವೈರ್ ನಿಂದ ಹೊಡೆದು ಅತ್ಯಾಚಾರವೆಸಗಿದ್ದಾನೆ. ನಂತರ ತನ್ನ ಗೆಳೆಯರ ಜೊತೆ ಸೇರಿ ಆಕೆಯ ಖಾಸಗಿ ಅಂಗಕ್ಕೆ ಚಿಲ್ಲಿ ಪೌಡರ್ ಹಾಕಿದ್ದಾರೆ. ಬಳಿಕ ಆಕೆಯ ಜೊತೆಗಿನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದರು.
ಸದ್ಯ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಯನ್ನು ಓಲಪಾಡ್ ಠಾಣೆಯ ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಐಪಿಸಿ 376 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.










