ಸಿಇಟಿ ಪರೀಕ್ಷೆ ನಡೆಯಲಿರುವ ದಿನವೇ ಸಿದ್ದರಾಮಯ್ಯ, ಡಿಕೆಶಿ ಪ್ರಮಾಣ ವಚನ – ವಿದ್ಯಾರ್ಥಿಗಳಿಗೆ ಟ್ರಾಫಿಕ್ ಆತಂಕ…

61
firstsuddi

ಬೆಂಗಳೂರು: ಸಿಇಟಿ ಪರೀಕ್ಷೆ ನಡೆಯಲಿರುವ ದಿನವೇ ಸಿದ್ದರಾಮಯ್ಯ- ಡಿಕೆ ಶಿವಕುಮಾರ್ ಪ್ರಮಾಣ ವಚನ ಸಮಾರಂಭ ನಡೆಯಲಿದೆ. ಹೀಗಾಗಿ ನಗರದ ಬಹುತೇಕ ಎಲ್ಲ ಭಾಗಗಳ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಸುಗಮ ಸಂಚಾರಕ್ಕೆ ಸಮಸ್ಯೆಯಾಗುವ ಸಾಧ್ಯತೆ ಇದ್ದು, ಇದರಿಂದ ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ.

ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಮೇ 20 ಮತ್ತು 21ರಂದು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ.

ಈ ಬಾರಿ ಸಿಇಟಿ ಪರೀಕ್ಷೆ ರಾಜ್ಯದ 592 ಕೇಂದ್ರಗಳಲ್ಲಿ ನಡೆಯಲಿದೆ. ಬೆಂಗಳೂರಿನಲ್ಲೇ 121 ಪರೀಕ್ಷಾ ಕೇಂದ್ರಗಳಿದ್ದು, ಉಳಿದ ಜಿಲ್ಲೆಗಳಲ್ಲಿ 471 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ರಾಜ್ಯಾದ್ಯಂತ ಪರೀಕ್ಷೆಗೆ 2,61,610 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. 592 ಅಬ್ಸವರ್ಸ್‌ಗಳು, 1,184 ವಿಶೇಷ ಸ್ಕ್ವಾಡ್ ಸಿಬ್ಬಂದಿ, 592 ಕಸ್ಟೋಡಿಯನ್, 10,900 ಇನ್ವಿಜಿಲೇಟರ್‌ಗಳು ಸೇರಿ 23,050 ಅಧಿಕಾರಿಗಳು ಪರೀಕ್ಷಾ ಕೇಂದ್ರಕ್ಕೆ ನಿಯೋಜನೆಗೊಂಡಿದ್ದಾರೆ.

ಮೇ 22ರ ಬೆಳಗ್ಗೆ 11:30ರಿಂದ 12:30ರ ವರೆಗೆ ಹೊರನಾಡು ಹಾಗೂ ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಬೆಂಗಳೂರು, ಬೆಳಗಾವಿ, ವಿಜಯಪುರ, ಬಳ್ಳಾರಿ ಹಾಗೂ ಮಂಗಳೂರು ಪರೀಕ್ಷಾ ಕೇಂದ್ರಗಳಲ್ಲಿ ಕನ್ನಡ ಭಾಷೆ ಪರೀಕ್ಷೆ ನಡೆಯಲಿದೆ. ಇದರಡಿ 2,084 ಅರ್ಹ ಅಭ್ಯರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಿಇಟಿ ಪರೀಕ್ಷೆ ನಡೆಯಲಿರುವ ಮೊದಲ ದಿನ ಶನಿವಾರದಂದೇ ಸಿದ್ದರಾಮಯ್ಯ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿರುವ ಸಮಾರಂಭಕ್ಕೆ ಬೆಳಗ್ಗೆಯಿಂದಲೇ ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಮೂಲೆ ಮೂಲೆಗಳಿಂದ ಪಕ್ಷದ ಕಾರ್ಯಕರ್ತರು, ಜನರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆಯಲ್ಲಿ ತುಮಕೂರು ರಸ್ತೆ, ಮೈಸೂರು ರಸ್ತೆ, ಬಳ್ಳಾರಿ ರಸ್ತೆ ಸೇರಿದಂತೆ ನಗರದ ಬಹುತೇಕ ಎಲ್ಲ ಭಾಗಗಳ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಸುಗಮ ಸಂಚಾರಕ್ಕೆ ಸಮಸ್ಯೆಯಾಗುವ ಸಾಧ್ಯತೆ ಇದೆ.

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣವಚನ ಕಾರ್ಯಕ್ರಮ ನಡೆಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.