ಬೆಂಗಳೂರು: ನಗರದ ಕೆ.ಆರ್. ಸರ್ಕಲ್ ಬಳಿಯ ಅಂಡರ್ಪಾಸ್ನ ನೀರಿನಲ್ಲಿ ಕಾರು ಮುಳುಗಿ ಯುವತಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಿನ ಚಾಲಕನನ್ನು ಹಲಸೂರು ಗೇಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಹರೀಶ್ ಬಂಧಿಸಿದ ಕಾರು ಚಾಲಕ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಯುವತಿ ಭಾನುರೇಖಾ(22), ಸಹೋದರ ಸಂದೀಪ್ ಅವರು ಹಲಸೂರು ಪೊಲೀಸ್ ಠಾಣೆಯಲ್ಲಿ ಕಾರಿನ ಚಾಲಕ ಮತ್ತು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದರು. ಆದರೆ, ಯುವತಿ ಸಾವಿನ ಘಟನೆಗೆ ಸಂಬಂಧಿಸಿದಂತೆ ನಾನು ಬೇಡವೆಂದರೂ ಕಾರು ಚಲಾಯಿಸುವಂತೆ ಕುಟುಂಬದ ಸದಸ್ಯರೇ ತಿಳಿಸಿದ್ದರು ಎಂದು ಹೇಳಿದ ಕಾರಿನ ಚಾಲಕ ಹರೀಶ್ ಅವರನ್ನು ಬಂಧಿಸಲಾಗಿದೆ.
ಮಳೆಯಿಂದಾಗಿ ಕೆ.ಆರ್. ಸರ್ಕಲ್ನ ಅಂಡರ್ಪಾಸ್ನಲ್ಲಿ ಸುಮಾರು 5 ಅಡಿಯಷ್ಟು ಎತ್ತರಕ್ಕೆ ನೀರು ತುಂಬಿತ್ತು. ಹೀಗಿದ್ದರೂ ಆರು ಮಂದಿ ಪ್ರಯಾಣಿಸುತ್ತಿದ್ದ ಕಾರು ಈ ಅಂಡರ್ಪಾಸ್ನಲ್ಲಿ ಹೋಗಿ ಮುಳುಗಿತ್ತು. ಕೂಡಲೇ ಎಚ್ಚೆತ್ತ ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯ ನಡೆಸಿ ಆರು ಮಂದಿಯನ್ನು ರಕ್ಷಿಸಿದ್ದರು. ಈ ಪೈಕಿ ತೀವ್ರ ಅಸ್ವಸ್ಥಗೊಂಡಿದ್ದ ಭಾನುರೇಖಾ ಸಾವನ್ನಪ್ಪಿದ್ದಳು.










