ನವದೆಹಲಿ: ಕೆಮ್ಮಿನ ಸಿರಪ್‌ಗಳನ್ನು ವಿದೇಶಕ್ಕೆ ರಫ್ತು ಮಾಡುವ ಮೊದಲು ಅದನ್ನು ಪರೀಕ್ಷೆಗೆ ಒಳಪಡಿಸುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಯಾವುದೇ ಕೆಮ್ಮಿನ ಸಿರಪ್ ಅನ್ನು ರಫ್ತು ಮಾಡುವುದಕ್ಕೂ ಮೊದಲು ಸರ್ಕಾರಿ ಪ್ರಯೋಗಾಲಯ ನೀಡಿದ ವಿಶ್ಲೇಷಣೆಯ ಪ್ರಮಾಣಪತ್ರವನ್ನು ಹೊಂದಿರುವುದು ಕಡ್ಡಾಯವಾಗಿದೆ. ಈ ಹೊಸ ವ್ಯವಸ್ಥೆ ಜೂನ್ 1 ರಿಂದ ಜಾರಿಗೆ ಬರಲಿದೆ. ಈ ಬಗ್ಗೆ ಎಲ್ಲ ಔಷಧ ಕಂಪನಿಗಳಿಗೆ ಸೂಚನೆ ನೀಡಲಾಗಿದೆ.
ಭಾರತ ಇಡೀ ವಿಶ್ವದಲ್ಲೇ ಅತಿ ದೊಡ್ಡ ಔಷಧೀಯ ಉದ್ಯಮವನ್ನು ಹೊಂದಿದೆ. ಆದರೆ ಕಳೆದ ವರ್ಷ ಗ್ಯಾಂಬಿಯಾದ 70 ಹಾಗೂ ಉಜ್ಬೇಕಿಸ್ತಾನದ 19 ಮಕ್ಕಳ ಸಾವಾಗಿತ್ತು. ಬಳಿಕ ಮಕ್ಕಳ ಸಾವಿಗೆ ಭಾರತ ನಿರ್ಮಿತ ಕೆಮ್ಮಿನ ಸಿರಪ್ ಕಾರಣ ಎಂದು ಆರೋಪಿಸಲಾಗಿದೆ.
ಸದ್ಯ ವಿದೇಶಗಳಿಗೆ ರಫ್ತು ಮಾಡುವ ಕೆಮ್ಮಿನ ಸಿರಪ್‌ಗಳ ಪರೀಕ್ಷೆಯನ್ನಷ್ಟೇ ಕೇಂದ್ರ ಕಡ್ಡಾಯಗೊಳಿಸಿದೆ. ಆದರೆ ದೇಶೀಯ ಮಾರುಕಟ್ಟೆಯಲ್ಲಿ ಈ ಸಿರಪ್‌ಗಳನ್ನು ಮಾರಾಟ ಮಾಡುವುದಕ್ಕೂ ಮುನ್ನ ಪರೀಕ್ಷೆಯ ಅಗತ್ಯವಿದೆಯೇ ಎಂಬುದಕ್ಕೆ ಆರೋಗ್ಯ ಸಚಿವಾಲಯ ಸ್ಪಷ್ಟನೆ ನೀಡಿಲ್ಲ.










