ಬೆಳಗಾವಿ: ಮಗ ಮಾನಸಿಕ ಅಸ್ವಸ್ಥ ಎಂಬ ಕಾರಣಕ್ಕೆ ಹೆತ್ತ ತಂದೆಯೇ ಮಗನಿಗೆ ವಿಷವುಣಿಸಿ ಕೊಲೆಗೈದಿರುವ ಘಟನೆ ಜಿಲ್ಲೆಯ ಖಾನಾಪುರ ಪಟ್ಟಣದ ಬಳಿಯ ಮಲಪ್ರಭಾ ನದಿತೀರದಲ್ಲಿ ನಡೆದಿದೆ.
ಮಾನಸಿಕವಾಗಿ ಅಸ್ವಸ್ಥನಾಗಿದ್ದ ತನ್ನ ಹಿರಿಯ ಮಗ ಬದುಕಿರುವವರೆಗೆ ಕಿರಿಯ ಮಗನ ಮದುವೆಗೆ ಅಡಚಣೆಯಾಗುತ್ತದೆ ಎಂದು ಭಾವಿಸಿದ್ದ ಮೃತ ಯುವಕನ ತಂದೆ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಪೊಲೀಸರ ತನಿಖೆಯಲ್ಲಿ ದೃಢಪಟ್ಟಿದೆ. ಬಂಧಿತ ತಂದೆಯನ್ನು ಪೊಲೀಸರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಖಾನಾಪುರ ಪಟ್ಟಣದ ಬಳಿ ಮಲಪ್ರಭಾ ನದಿತೀರದಲ್ಲಿ ಪತ್ತೆಯಾದ ಅಪರಿಚಿತ ಶವದ ಮರಣೋತ್ತರ ತನಿಖೆ ನಡೆಸಿದ್ದ ಪೊಲೀಸರಿಗೆ ಮೃತ ವ್ಯಕ್ತಿ ವಿಷ ಸೇವಿಸಿದ್ದು, ಜೊತೆಗೆ ಆತನ ತಲೆಗೆ ಬಲವಾಗಿ ಪೆಟ್ಟು ಬಿದ್ದಿರುವುದು ತಿಳಿದುಬಂದಿತ್ತು. ಹೀಗಾಗಿ ಪೊಲೀಸರು ಈ ಪ್ರಕರಣವನ್ನು ಅನುಮಾನಾಸ್ಪದ ಸಾವು ಎಂದು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಪ್ರಕರಣ ದಾಖಲಾಗಿ ಕೆಲದಿನಗಳ ಬಳಿಕ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿದ್ದು, ಆತ ಹುಕ್ಕೇರಿ ತಾಲೂಕಿನ ಬೋರಗಲ್ ಗ್ರಾಮದ ನಿವಾಸಿ ನಿಖಿಲ ರಾಜಕುಮಾರ ಮಗದುಮ್ಮ (24) ಎಂದು ಪೊಲೀಸರಿಗೆ ತಿಳಿದುಬಂದಿತ್ತು. ನಿಖಿಲ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು ಕಳೆದ ಜು.7ರಂದು ಆತನ ಚಿಕ್ಕಪ್ಪ ಸಂತೋಷ ಮಗದುಮ್ಮ ಅವರನ್ನು ಠಾಣೆಗೆ ಕರೆಸಿ ವಿಚಾರಿಸಿದಾಗ ಅವರು ಅಣ್ಣ ರಾಜಕುಮಾರ ಶಂಕರ ಮಗದುಮ್ಮ (45) ನಿಖಿಲ ಕೊಲೆ ಮಾಡಿರುವುದಾಗಿ ತಿಳಿಸಿ ರಾಜಕುಮಾರ ವಿರುದ್ಧ ದೂರು ನೀಡಿದ್ದರು.
ರಾಜಕುಮಾರ ಅವರನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದ ಪೊಲೀಸರು ಅವರನ್ನು ವಿಚಾರಣೆ ನಡೆಸಿದಾಗ ತಮ್ಮ ಹಿರಿಯ ಮಗ ನಿಖಿಲ್ ಮಾನಸಿಕ ಅಸ್ವಸ್ಥನಿದ್ದು, ಆತ ಬದುಕಿರುವವರೆಗೆ ಕಿರಿಯ ಮಗ ನಿತೀಶ್ನ ಮದುವೆ ಮಾಡಲು ತೊಂದರೆ ಆಗುತ್ತದೆ ಎಂದು ಭಾವಿಸಿ ಆತನನ್ನು ಮೇ 30ರಂದು ಬೋರಗಲ್ ಗ್ರಾಮದ ತಮ್ಮ ಮನೆಯಿಂದ ಪಟ್ಟಣದ ಮಲಪ್ರಭಾ ನದಿಯ ಬಳಿ ಕರೆದುಕೊಂಡು ಹೋಗಿ ವಿಷ ಕುಡಿಸಿ, ಗಿಡಕ್ಕೆ ಜೋರಾಗಿ ತಲೆ ಹಾಯಿಸಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಬೆಳಗಾವಿ ಎಸ್.ಪಿ ಸಂಜೀವ್ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ನಿಖಿಲ್ ಅವರ ಕೊಲೆ ಪ್ರಕರಣವನ್ನು ಬೇಧಿಸಿರುವ ಖಾನಾಪುರ ಠಾಣೆಯ ಪಿಐ ಮಂಜುನಾಥ್ ನಾಯ್ಕ್ ಹಾಗೂ ಸಿಬ್ಬಂದಿ ರಾಜಕುಮಾರ ಶಂಕರ್ ಮಗದುಮ್ಮ ಅವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಧೀಶರ ಆದೇಶದನ್ವಯ ರಾಜಕುಮಾರ ಅವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.










