6 ತಿಂಗಳ ಮಗು ಸೇರಿ ನಾಲ್ವರನ್ನು ಕೊಂದು ಬೆಂಕಿ ಹಚ್ಚಿದ ದುಷ್ಕರ್ಮಿಗಳು…

44
firstsuddi

ಜೋಧ್‌ಪುರ: 6 ತಿಂಗಳ ಹೆಣ್ಣು ಮಗು ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆಗೈದು, ಬೆಂಕಿ ಹಚ್ಚಿರುವ ಘಟನೆ ರಾಜಸ್ಥಾನದ ಜೋಧ್‌ಪುರದ ಚೆರೈ ಗ್ರಾಮದಲ್ಲಿ ನಡೆದಿದೆ.

ರಾಮನಗರ ಗ್ರಾಮ ಪಂಚಾಯತ್‍ನ ಗಂಗಾನಿ ಕಿ ಧಾನಿ ಎಂಬಲ್ಲಿ ವಾಸಿಸುತ್ತಿರುವ ಕುಟುಂಬದ ನಾಲ್ವರು ಸದಸ್ಯರ ಮೃತದೇಹಗಳು ಅರೆಸುಟ್ಟ ಸ್ಥಿತಿಯಲ್ಲಿ ದೊರೆತಿವೆ. ಮೃತರನ್ನು ಕುಟುಂಬದ ಮುಖ್ಯಸ್ಥ ಪೂನರಾಮ್ (55), ಅವರ ಪತ್ನಿ ಬನ್ವಾರಿ (50), ಸೊಸೆ ಥಾಬು (24) ಮತ್ತು ಅವರ 6 ತಿಂಗಳ ಮೊಮ್ಮಗಳು ಎಂದು ಗುರುತಿಸಲಾಗಿದೆ.

ಗ್ರಾಮಾಂತರ ಪೊಲೀಸ್ ಠಾಣಾ ವರಿಷ್ಠಾಧಿಕಾರಿ ಧರ್ಮೇಂದ್ರ ಸಿಂಗ್ ಯಾದವ್ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಘಟನೆ ಬಗ್ಗೆ ಮಾಹಿತಿ ನೀಡಿದ ಅವರು, “ರಾಮನಗರ ಗ್ರಾಮದಲ್ಲಿ ಅಪರಿಚಿತ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಕುಟುಂಬದ ನಾಲ್ವರು ಸದಸ್ಯರ ಪೈಕಿ ಹೆಣ್ಣು ಮಗುವೂ ಸೇರಿದೆ. ನಾಲ್ವರೂ ಕತ್ತು ಸೀಳಿ, ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ದುಷ್ಕರ್ಮಿಗಳು ಕೊಲೆ ಮಾಡಿದ ನಂತರ ದೇಹಗಳನ್ನು ಅವರ ಗುಡಿಸಲಿನಲ್ಲೇ ಸುಡಲು ಪ್ರಯತ್ನಿಸಿರುವುದು ತಿಳಿಯುತ್ತದೆ. ಘಟನೆ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ” ಎಂದು ತಿಳಿಸಿದ್ದಾರೆ.