ಹಿರಿಯ ನಟಿ ಭೈರವಿ ವೈದ್ಯ ಅವರು ನಿಧನ ಹೊಂದಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. ಕಳೆದ ಆರು ತಿಂಗಳಿಂದ ಅವರು ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಭೈರವಿ ಅವರ ಮಗಳು ಜಾನಕಿ ವೈದ್ಯ ಅವರು ಈ ವಿಚಾರವನ್ನು ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಹಂಚಿಕೊಂಡಿರುವ ಜಾನಕಿ ‘ನೀನು ನನ್ನ ಪಾಲಿಗೆ ಅಮ್ಮ ಜೊತೆ ಎಲ್ಲವೂ. ನೀವು ಕಲರ್ಫುಲ್, ಫಿಯರ್ಲೆಸ್. ನೀವು ಮಕ್ಕಳನ್ನು ಬೆಳೆಸುವುದರ ಜೊತೆಗೆ ಕನಸನ್ನು ಈಡೇರಿಸುವ ರೀತಿ ಮಾಡಿದೆ’ ಎಂದು ಅವರು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಅನಿಲ್ ಕಪೂರ್, ಐಶ್ವರ್ಯಾ ರೈ, ಅಕ್ಷಯ್ ಖನ್ನಾ ಅಭಿನಯದ ‘ತಾಲ್’ ಸಿನಿಮಾದ ಮೂಲಕ ಭೈರವಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಸಲ್ಮಾನ್ ಖಾನ್ ಅಭಿನಯದ ‘ಚೋರಿ ಚೋರಿ ಚುಪ್ಕೆ ಚುಪ್ಕೆ’ ಚಿತ್ರದಲ್ಲಿ ಭೈರವಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರು ಪ್ರಸಿದ್ಧ ರಂಗಭೂಮಿ ಕಲಾವಿದೆ. ಭೈರವಿ ಕಳೆದ 45 ವರ್ಷಗಳಿಂದ ನಟನಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ಅವರು ಗುಜರಾತಿ, ಹಿಂದಿ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದರು.
ಭೈರವಿ ನಿಧನಕ್ಕೆ ಚಿತ್ರರಂಗದ ಅನೇಕರು ಹಾಗೂ ಅವರ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.










