ಉಡುಪಿ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿಯಲ್ಲಿ ಪ್ರವೀಣ್ ಅರುಣ್ ಚೌಗಲೆ(35) ಎಂಬಾತನನ್ನು ಬಂಧಿಸಿರುವುದಾಗಿ ವರದಿಯಾಗಿದೆ. ಈತ ಮಹಾರಾಷ್ಟ್ರದ ಸಾಂಗ್ಲಿ ಮೂಲದವನು ಎಂದು ತಿಳಿದುಬಂದಿದೆ.
ಆರೋಪಿ ಅರುಣ್ ಬೆಳಗಾವಿಯಲ್ಲಿ ಇರುವ ಬಗ್ಗೆ ಮಾಹಿತಿ ಉಡುಪಿ ಡಿವೈಎಸ್ಪಿ ನೇತೃತ್ವದ ತಂಡಕ್ಕೆ ಸಿಕ್ಕಿದ್ದು, ಅದರಂತೆ ಈ ಮಾಹಿತಿಯನ್ನು ಬೆಳಗಾವಿ ಪೊಲೀಸರಿಗೆ ನೀಡಲಾಗಿತ್ತು. ಆರೋಪಿ ಅರುಣ್ ಮನೆಯೊಂದರಲ್ಲಿ ಇರುವುದು ಖಚಿತವಾಗಿತ್ತು. ಅದರಂತೆ ತಕ್ಷಣವೇ ಬೆಳಗಾವಿ ಪೊಲೀಸರು ಮಫ್ತಿಯಲ್ಲಿ ಮನೆ ಸುತ್ತುವರಿದಿದ್ದರು.
ಇತ್ತ ಉಡುಪಿಯಿಂದ ಹೊರಟಿದ್ದ ತಂಡವೂ ಕುಡಚಿ ತಲುಪಿ ಬೆಳಗಾವಿ ಮತ್ತು ಉಡುಪಿ ಪೊಲೀಸರಿಂದ ಜಂಟಿ ಕಾರ್ಯಾಚರಣೆಯೊಂದಿಗೆ ಆರೋಪಿಯನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ. ಬೆಳಗಾವಿಯಿಂದ ಬೇರೆಡೆ ತೆರಳಲು ಸಜ್ಜಾಗಿದ್ದ ಆರೋಪಿ ಅರುಣ್ ಚೌಗಲೆಯನ್ನು ಪೊಲೀಸರು ವಶಕ್ಕೆ ಪಡೆದು ಉಡುಪಿಗೆ ಕರೆತಂದಿದ್ದಾರೆ.
ಕಳೆದ ಭಾನುವಾರ(ನ.12) ಉಡುಪಿ ಸಮೀಪದ ನೇಜಾರು ಬಳಿಯ ತೃಪ್ತಿ ಲೇಜೌಟ್ನಲ್ಲಿ ಮನೆಯೊಂದಕ್ಕೆ ನುಗ್ಗಿದ್ದ ದುಷ್ಕರ್ಮಿಯೋರ್ವ ತಾಯಿ ಹಾಗೂ ಮೂವರು ಮಕ್ಕಳನ್ನು ಬರ್ಬರವಾಗಿ ಇರಿದು ಹತ್ಯೆ ಮಾಡಿ, ಪರಾರಿಯಾಗಿದ್ದ. ಈ ಘಟನೆ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು.
ಘಟನೆಯಲ್ಲಿ ಮನೆಯ ಯಜಮಾನಿ ಹಸೀನಾ ಹಾಗೂ ಅವರ ಮಕ್ಕಳಾದ ಅಫ್ನಾನ್ (23), ಅಯ್ನಾಝ್ (21), ಅಸೀಮ್ (14) ಕೊಲೆಯಾದವರು. ಇದರ ಜೊತೆಗೆ ಕೊಲೆಯಾದ ಮಹಿಳೆ ಹಸೀನಾಳ ಅತ್ತೆಯ ಮೇಲೂ ಹಲ್ಲೆ ನಡೆಸಿ ಪರಾರಿಯಾಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡ ಪೊಲೀಸರು, ಆರೋಪಿ ಪತ್ತೆಗಾಗಿ ಬರೊಬ್ಬರಿ 5 ತಂಡಗಳನ್ನು ರಚನೆ ಮಾಡಿದ್ದರು. ಅದರಂತೆ ಇದೀಗ ಕುಡಚಿಯಲ್ಲಿ ಹಂತಕ ಸಿಕ್ಕಿಬಿದ್ದಿದ್ದಾನೆ.










