ದೇವಸ್ಥಾನದ ಪ್ರಸಾದ ಸೇವಿಸಿ ನೂರಾರು ಮಂದಿ ಅಸ್ವಸ್ಥ- ಓರ್ವ ಮಹಿಳೆ ಸಾವು…

55
firstsuddi

ಬೆಂಗಳೂರು ಗ್ರಾಮಾಂತರ: ಹನುಮ ಜಯಂತಿ ಹಿನ್ನೆಲೆ ದೇವಾಲಯಗಳಲ್ಲಿ ಪ್ರಸಾದ ಸೇವಿಸಿ ನೂರಾರು ಜನ ಅಸ್ವಸ್ಥಗೊಂಡಿದ್ದು, ಓರ್ವ ಮಹಿಳೆ ಸಾವನ್ನಪ್ಪಿದ ಘಟನೆ ಜಿಲ್ಲೆಯ ಹೊಸಕೋಟೆ ನಗರದಲ್ಲಿ ನಡೆದಿದೆ.

ಸಿದ್ದಗಂಗಮ್ಮ (65) ಸಾವನ್ನಪ್ಪಿದ ಮಹಿಳೆ. ಹನುಮ ಜಯಂತಿ ಅಂಗವಾಗಿ ನಿನ್ನೆ ಭಕ್ತರು ನಗರದ ವೆಂಕಟರಮಣಸ್ವಾಮಿ, ಊರುಬಾಗಿಲು ಆಂಜನೇಯ ಸ್ವಾಮಿ, ಕೋಟೆ ಆಂಜನೇಯ ಸ್ವಾಮಿ ದೇವಾಲಯಗಳಿಗೆ ತೆರಳಿದ್ದರು. ಅಲ್ಲಿ ಪುಳಿಯೊಗರೆ, ಪಾಯಸ ಹಾಗೂ ಲಡ್ಡನ್ನು ಪ್ರಸಾದದ ರೂಪದಲ್ಲಿ ನೆರೆದಿದ್ದ ಭಕ್ತರು ಸೇವಿಸಿದ್ದಾರೆ. ಪ್ರಸಾದ ಸೇವನೆ ಬಳಿಕ ಭಕ್ತರಿಗೆ ವಾಂತಿ ಹಾಗೂ ಭೇದಿ ಪ್ರಾರಂಭವಾಗಿದ್ದು, ನೂರಾರು ಜನ ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥಗೊಂಡ ಭಕ್ತರನ್ನು ಹೊಸಕೋಟೆ ಖಾಸಗಿ ಆಸ್ಪತ್ರೆ, ಕೋಲಾರ ಹಾಗೂ ಬೆಂಗಳೂರಿನ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇನ್ನು ಈ ಪ್ರಕರಣದಲ್ಲಿ ಹೊಸಕೋಟೆ ನಗರದ ಕಾವೇರಿ ನಗರ ನಿವಾಸಿ ಸಿದ್ದಗಂಗಮ್ಮ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಮಹಿಳೆ ಇಂದು ಬೆಳಗ್ಗೆ ವಾಂತಿ ಭೇದಿ ಎಂದು ಆಸ್ಪತ್ರೆಗೆ ದಾಖಲಾಗಿದ್ದು, ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ವತ್ರೆಯಲ್ಲಿ ಮೃತಪಟ್ಟಿದ್ದಾರೆ. ಘಟನೆಯಿಂದ 15ಕ್ಕೂ ಅಧಿಕ ಜನರ ಸ್ಥಿತಿ ಗಂಭೀರವಾಗಿದ್ದು, ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನೂ ಅಸ್ವಸ್ಥತೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹೊಸಕೋಟೆ ಠಾಣೆ ಪೊಲೀಸರು ಸದ್ಯ ಅಸ್ವಸ್ಥಗೊಂಡವರ ಮಾಹಿತಿ ಕಲೆ ಹಾಕುತ್ತಿದ್ದಾರೆ.