ಕನ್ನಡ ಚಿತ್ರರಂಗದ ಜನಪ್ರಿಯ ನಟ ದರ್ಶನ್ ಜೊತೆಗಿನ ಫೋಟೋವನ್ನು ನಟಿ ಪವಿತ್ರಗೌಡ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಜೊತೆಗಿನ ಫೋಟೋ ಹಂಚಿಕೊಂಡಿರುವ ಪವಿತ್ರಾ ಗೌಡ ಅವರು ‘ನಮ್ಮಿಬ್ಬರ ಸಂಬಂಧ 10 ವರ್ಷ ಪೂರೈಸಿದೆ. ಥ್ಯಾಂಕ್ ಯು’ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಈ ಪೋಸ್ಟ್ ಕುರಿತು ದರ್ಶನ್ ಪತ್ನಿ ವಿಜಯಲಕ್ಷ್ಮೀ ಇನ್‍ಸ್ಟಾಗ್ರಾಮ್ ನಲ್ಲಿ ಅಸಮಾಧಾನ ಹೊರಹಾಕಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ವಿಜಯಲಕ್ಷ್ಮಿ ದರ್ಶನ್, ‘ಈ ಮಹಿಳೆಗೆ ಪ್ರಜ್ಞೆ ಇದ್ದಿದ್ದರೆ ಬೇರೊಬ್ಬರ ಗಂಡನ ಚಿತ್ರವನ್ನು ಪೋಸ್ಟ್ ಮಾಡುತ್ತಿರಲಿಲ್ಲ. ಈ ಕಾರ್ಯ ಆಕೆಯ ನೈತಿಕತೆ ಮತ್ತು ಆದರ್ಶ ಎಂಥಹದ್ದು ಎಂದು ತೋರಿಸುತ್ತದೆ. ವ್ಯಕ್ತಿಯೊಬ್ಬ ವಿವಾಹಿತನೆಂದು ತಿಳಿದಿದ್ದರೂ ಸಹ ಈಕೆ ತನ್ನ ವೈಯಕ್ತಿಕ ಅಗತ್ಯಗಳಿಗಾಗಿ ಮತ್ತು ಲಾಭಕ್ಕಾಗಿ ಹತ್ತಿರವಾಗುತ್ತಾಳೆ. ಖುಷಿ ಗೌಡ, ಪವಿತ್ರಾ ಮತ್ತು ಸಂಜಯ್ ಸಿಂಗ್ ಅವರ ಮಗಳು ಎಂಬುದನ್ನು ಸ್ಪಷ್ಟವಾಗಿ ಸಾಬೀತು ಮಾಡುತ್ತವೆ ಈ ಚಿತ್ರಗಳು. ನಾನು ಸಾಮಾನ್ಯವಾಗಿ ವೈಯಕ್ತಿಕ ವಿಷಯಗಳ ಬಗ್ಗೆ ಮಾತನಾಡಲು ಸಾಮಾಜಿಕ ಮಾಧ್ಯಮವನ್ನು ಬಳಸುವುದಿಲ್ಲ. ಆದರೆ ಈಗ ನನ್ನ ಕುಟುಂಬದ ಹಿತದೃಷ್ಟಿಯಿಂದ ಧ್ವನಿ ಎತ್ತುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ಇಡೀ ಸಮಾಜಕ್ಕೆ ತಪ್ಪು ಚಿತ್ರಣ ನೀಡಲು ಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಪವಿತ್ರಾ ಗೌಡ ಮತ್ತು ಅವರ ಪತಿ ಸಂಜಯ್ ಸಿಂಗ್ ಫೋಟೋಗಳ ಸಮೇತ ಖಡಕ್ ಎಚ್ಚರಿಕೆಯನ್ನು ವಿಜಯಲಕ್ಷ್ಮೀ ನೀಡಿದ್ದಾರೆ.
ಪವಿತ್ರಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟೀವ್ ಆಗಿರುತ್ತಾರೆ. ಆಗಾಗ್ಗೆ ಆಕರ್ಷಕ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿರುವ ಪವಿತ್ರಾಗೌಡ, ಮಾಡೆಲ್ ಮತ್ತು ಕಿರುತೆರೆಯಲ್ಲೂ ಮಿಂಚಿದ್ದಾರೆ.










