ಉಜ್ಬೇಕಿಸ್ತಾನ್ ಮಹಿಳೆ ಕೊಲೆ ಕೇಸ್: ಇಬ್ಬರು ಆರೋಪಿಗಳ ಬಂಧನ…

40
firstsuddi

ಬೆಂಗಳೂರು: ಉಜ್ಬೇಕಿಸ್ತಾನದ ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೇಷಾದ್ರಿಪುರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಅಸ್ಸಾಂನ ಅಮೃತ್ ಹಾಗೂ ರಾಬರ್ಟ್ ಬಂಧಿತರು. ಇವರು ಕೆಲಸ ಅರಸಿಕೊಂಡು ಬೆಂಗಳೂರಿಗೆ ಬಂದಿದ್ದರು. ಬಿಡಿಎ ಸಮೀಪದ ಹೋಟೆಲ್‌ನ ಸ್ವಚ್ಛತಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ವಿದೇಶಿ ಮಹಿಳೆ ಜರೀನಾ ಬಳಿ ತುಂಬಾ ಹಣವಿದೆ ಎಂದು ಹಣದಾಸೆಗೆ ಈ ಕೃತ್ಯ ಎಸಗಿದ್ದು, ಬಂಧಿತ ಆರೋಪಿಗಳಿಂದ 13000 ಸಾವಿರ ನಗದು, 2000 ಮುಖಬೆಲೆಯ ಉಜ್ಬೇಕಿಸ್ತಾನದ ಎರಡು ನೋಟುಗಳು 5000 ಮುಖಬೆಲೆಯ ಒಂದು ನೋಟನ್ನು ಸೀಜ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ?: ಪ್ರವಾಸಿ ವೀಸಾದಡಿ ಬೆಂಗಳೂರಿಗೆ ಬಂದಿದ್ದ ಜರೀನಾ ಕಳೆದ ಆರು ದಿನಗಳಿಂದ ಶೇಷಾದ್ರಿಪುರ ಬಳಿಯಿರುವ ಜಗದೀಶ್ ಹೋಟೆಲ್‌ನಲ್ಲಿ ತಂಗಿದ್ದರು. ಬುಧವಾರ ಸಂಜೆಯಿಂದ ಹೋಟೆಲ್ ಸಿಬ್ಬಂದಿಗೆ ಜರೀನಾ, ಪ್ರತಿಕ್ರಿಯಿಸದ ಕಾರಣ ಅನುಮಾನಗೊಂಡ ಸಿಬ್ಬಂದಿ ಮಾಸ್ಟರ್ ಕೀ ಬಳಸಿ ರೂಮ್ನ ಬಾಗಿಲು ತೆರೆದಿದ್ದರು. ಈ ವೇಳೆ ಜರೀನಾ ಶವ ರೂಪದಲ್ಲಿ ಪತ್ತೆಯಾಗಿದ್ದರು. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಶೇಷಾದ್ರಿಪುರ ಪೊಲೀಸರು ಪರಿಶೀಲನೆ ನಡೆಸಿ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಬೌರಿಂಗ್ ಆಸ್ಪತ್ರೆಗೆ ರವಾನಿಸಿದ್ದರು. ಮರಣೋತ್ತರ ಪರೀಕ್ಷೆಯ ಬಳಿಕ ಇದು ಅನುಮಾನಾಸ್ಪದ ಸಾವಲ್ಲ, ಕೊಲೆ ಅನ್ನೋದು ಬೆಳಕಿಗೆ ಬಂದಿದೆ.

ಈ ಮಹಿಳೆ ಕಳೆದ ಕೆಲ ವರ್ಷಗಳಿಂದ ಭಾರತ ಪ್ರವಾಸ ಮಾಡ್ತಿದ್ದು, 50 ಕ್ಕೂ ಹೆಚ್ಚು ಬಾರಿ ಭಾರತಕ್ಕೆ ಬಂದಿದ್ದರು. ಆದರೆ ಬೆಂಗಳೂರಿನಲ್ಲಿ ಕೊಲೆಯಾಗಿದ್ದಾರೆ. ಹೋಟೆಲ್‌ನಲ್ಲಿ ಹೌಸ್ ಕೀಪಿಂಗ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿಗಳಿಬ್ಬರು ರೂಮ್ ಸರ್ವಿಸ್​ಗೆ ಹೋಗಿದ್ದಾಗ ಈಕೆಯನ್ನ ಬಲೆಗೆ ಬೀಳಿಸಲು ಯತ್ನಿಸಿದ್ದಾರೆ. ಅನುಚಿತವಾಗಿ ವರ್ತಿಸಿದ ಯುವಕರಿಗೆ ವಿದೇಶಿ ಮಹಿಳೆ ಕಪಾಳಮೋಕ್ಷ ಮಾಡಿದ್ದಾಳೆ. ಇದರಿಂದ ಕೋಪಗೊಂಡು ಮಹಿಳೆಯನ್ನ ಉಸಿರುಗಟ್ಟಿಸಿ ಕೊಲೆ ಮಾಡಿ ಆಕೆ ಬಳಿಯಿದ್ದ ಹಣ ಮತ್ತು ಮೊಬೈಲ್ ಕದ್ದು ಎಸ್ಕೇಪ್ ಆಗಿದ್ದರು. ಈ ಬಗ್ಗೆ ಮಾಹಿತಿಯನ್ನು ಕಲೆಹಾಕಿದ ಪೊಲೀಸರು ಈ ಇಬ್ಬರಿಗಾಗಿ ವಿಶೇಷ ತಂಡ ರಚಿಸಿ ಶೋಧ ಕಾರ್ಯ ಆರಂಭಿಸಿ ಬಂಧಿಸಿದ್ದಾರೆ.