ದಾವಣಗೆರೆ: ರಂಜಾನ್ ಹಬ್ಬ ಹಿನ್ನೆಲೆ ಉಪವಾಸ ಬಳಿಕ ಪಾನಿಪೂರಿ ಸೇವಿಸಿ 19 ಮಕ್ಕಳು ಅಸ್ವಸ್ಥ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಬಾಲಕ ಚಿಕಿತ್ಸೆ ಫಲಿಸದೆ ಶನಿವಾರ ರಾತ್ರಿ ಮೃತಪಟ್ಟಿದ್ದಾನೆ.
ಮನೆಬೆನ್ನೂರಿನ ಹಜರತ್ ಬಿಲಾಲ್ ಪುತ್ರ ಇರ್ಫಾನ್(6) ಮೃತ ಬಾಲಕ. ಮಾರ್ಚ್ 15ರಂದು ಜಿಲ್ಲೆಯ ಹರಿಹರ ತಾಲೂಕಿನ ಮಲೆಬೆನ್ನೂರಿನಲ್ಲಿ ರಂಜಾನ್ ಹಬ್ಬ ಹಿನ್ನೆಲೆ ಮಕ್ಕಳು ಉಪವಾಸ ಇದ್ದರು. ನಂತರ ಜಾಮೀಯಾ ಮಸೀದಿ ಬಳಿ ಪಾನಿಪೂರಿ ಸೇವಿಸಿದ್ದರು.
ವಾಂತಿ, ಭೇದಿ, ಹೊಟ್ಟೆ ನೋವಿನಿಂದ 19 ಮಕ್ಕಳು ಆಸ್ಪತ್ರೆ ಸೇರಿದ್ದರು. ಈ ಪೈಕಿ ನಾಲ್ವರಿಗೆ ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಆದರೆ ಚಿಕಿತ್ಸೆ ಫಲಿಸದೆ ಬಾಲಕ ಇರ್ಫಾನ್ ಸಾವನ್ನಪ್ಪಿದ್ದಾನೆ. ಗಂಭೀರ ಸ್ಥಿತಿಯಲ್ಲಿದ್ದ ಇನ್ನೂ ಮೂರು ಮಕ್ಕಳು ಸದ್ಯ ಚೇತರಿಸಿಕೊಂಡಿದ್ದಾರೆ.
ಘಟನೆ ಬಳಿಕ ಪಾನಿಪುರಿ ಅಂಗಡಿ ಮಾಲೀಕ ಪರಾರಿ ಆಗಿದ್ದಾನೆ. ಈ ಸಂಬಂಧ ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










