ಬೆಂಗಳೂರಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ: ಇಂದು ಅಧಿಕಾರಿಗಳ ಜೊತೆ ಸಿಎಂ ಮಹತ್ವದ ಸಭೆ…

48
firstsuddi

ಬೆಂಗಳೂರು: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆ ಇಂದು ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ಅವರು ಮಹತ್ವದ ಸಭೆ ನಡೆಸಲಿದ್ದಾರೆ.

ಗೃಹಕಚೇರಿ ಕೃಷ್ಣಾದಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ. ಅಗತ್ಯ ಮಾಹಿತಿಯೊಂದಿಗೆ ಸಭೆಗೆ ಆಗಮಿಸುವಂತೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಬೆಂಗಳೂರು ನಗರ ಡಿಸಿ, ಬಿಬಿಎಂಪಿ, ಬೆಂಗಳೂರು ಜಲಮಂಡಳಿ ಹಿರಿಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ.

ಕಳೆದೊಂದು ತಿಂಗಳಿಂದ ಬೆಂಗಳೂರಲ್ಲಿ ನೀರಿನ ಸಮಸ್ಯೆ ಬಿಗಡಾಯಿಸುತ್ತಿದೆ. ಒಂದೆಡೆ ಕಾವೇರಿ ನೀರಿನ ಅಭಾವ, ಇನ್ನೊಂದೆಡೆ ಬರಿದಾದ ಕೊಳವೆ ಬಾವಿಗಳು, ಇದರ ಮಧ್ಯೆ ಖಾಸಗಿ ಟ್ಯಾಂಕರ್​ಗಳ ಹಗಲು ದರೋಡೆಯಿಂದ ಜನರು ನೀರಿಗಾಗಿ ಪರದಾಡುವಂತಾಗಿದೆ. ಪ್ರತಿಪಕ್ಷಗಳು ಇದು ಸರ್ಕಾರದ ವೈಫಲ್ಯವೆಂದು ಆರೋಪಿಸಿ ಈಗಾಗಲೇ ಪ್ರತಿಭಟನೆ ನಡೆಸುತ್ತಿವೆ. ಲೋಕಸಭೆ ಚುನಾವಣೆಯ ಬೆನ್ನಲ್ಲೇ ಬೆಂಗಳೂರಲ್ಲಿ ನೀರಿನ ಸಮಸ್ಯೆ ಕಾಂಗ್ರೆಸ್ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ.

ಈಗಾಗಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಅಧಿಕಾರಿಗಳ ಜೊತೆ ಸಭೆ ನಡೆಸಿ, ನಗರದ ನೀರಿನ ಸಮಸ್ಯೆ ಪರಿಹರಿಸಲು ಯತ್ನಿಸಿದ್ದರು. ಆದರೂ ಸಮಸ್ಯೆ ತೀವ್ರಗೊಳ್ಳುತ್ತಿದೆ. ಖಾಸಗಿ ಟ್ಯಾಂಕರ್​ಗಳು ನೋಂದಾಯಿಸಿಕೊಳ್ಳುವಂತೆ ಡಿಸಿಎಂ ಖಡಕ್ ಸೂಚನೆ ಕೊಟ್ಟರೂ, ಅತ್ಯಲ್ಪ ಸಂಖ್ಯೆಯಲ್ಲಿ ಟ್ಯಾಂಕರ್​ಗಳು ನೋಂದಣಿ ಮಾಡಿಸಿಕೊಂಡಿವೆ.