ಬೆಂಗಳೂರು: ಅನುಮತಿ ಇಲ್ಲದೇ ಬೋರ್‌ವೆಲ್ ಕೊರೆಯಬಾರದು ಎಂದು ಜಲಮಂಡಳಿ ಆದೇಶ ಮಾಡಿದ್ದರೂ ಸಹ ನಗರದಲ್ಲಿ ಅನುಮತಿ ಪಡೆಯದೇ ಬೋರ್‌ವೆಲ್ ಕೊರೆಯುತ್ತಿರುವುದು ಪತ್ತೆಯಾಗಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 20 ಅಕ್ರಮ ಬೋರ್‌ವೆಲ್‍ಗಳು ಪತ್ತೆಯಾಗಿದೆ.
ಅನುಮತಿ ಇಲ್ಲದೆ 20 ಕೊಳವೆ ಬಾವಿಗಳನ್ನು ಕೊರೆದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಎಂಜಿನಿಯರ್‌ಗಳಿಗೆ ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ನೀರಿನ ಅಭಾವ ಇರುವ ಹಿನ್ನೆಲೆ ಜಲಮಂಡಳಿ ನಾನಾ ಕ್ರಮಗಳನ್ನು ಜಾರಿ ಮಾಡುತ್ತಿದೆ. ಇದರ ಮಧ್ಯೆದಲ್ಲಿ ಅನಧಿಕೃತವಾಗಿ ಬೋರ್‌ವೆಲ್ ಕೊರೆಯಬಾರದು ಎಂದು ಆದೇಶ ಸಹ ಮಾಡಿದೆ. ಆದೇಶವನ್ನೂ ಲೆಕ್ಕಿಸದೆ ಬೆಂಗಳೂರಿನ ದಕ್ಷಿಣ ವಲಯ, ಪೂರ್ವ ವಲಯ ಕೆಆರ್ ಪುರಂ ಮತ್ತು ಮಹಾದೇವಪುರ ವಲಯದಲ್ಲಿ 20 ಬೋರ್‌ವೆಲ್‍ಗಳನ್ನು ಅನಧಿಕೃತವಾಗಿ ಕೊರೆದಿರುವುದು ಪತ್ತೆಯಾಗಿದೆ. ಕೆಆರ್ ಪುರಂನ ವಿಭೂತಿಪುರದಲ್ಲಿ ಅನಧಿಕೃವಾಗಿ ಬೋರ್‌ವೆಲ್ ಕೊರೆಯುತ್ತಿದ್ದು, ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಸುಮಾರು 20 ಅಕ್ರಮ ಬೋರ್‌ವೆಲ್ ಪತ್ತೆಯಾಗಿದ್ದು, ಕೊರೆಸಿದವರ ವಿರುದ್ಧ ಜಲಮಂಡಳಿ ಕಾನೂನು ಹೋರಾಟಕ್ಕೆ ಮುಂದಾಗಿದೆ.
ನಗರದಲ್ಲಿ ಅನಧಿಕೃತವಾಗಿ ಬೋರ್‌ವೆಲ್ ಕೊರೆದಿರೋದು ಕಂಡು ಬಂದರೆ ಸಾರ್ವಜನಿಕರು ಜಲಮಂಡಳಿಗೆ ದೂರು ಕೊಡಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ದೂರು ನೀಡಲು, 1619 ನಂಬರ್‌ಗೆ ಕರೆ ಮಾಡುವಂತೆ ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾದ್ ಮನೋಹರ್ ಮನವಿ ಮಾಡಿದ್ದಾರೆ.










