ಬೀದರ್: ವ್ಯಕ್ತಿಯೊಬ್ಬ ಕುಡಿಯುವ ನೀರಿನ ಟ್ಯಾಂಕ್‍ಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಅಣದೂರ್ ಗ್ರಾಮದಲ್ಲಿ ನಡೆದಿದೆ.
ಮೃತನ ಪತ್ನಿ ಬೇರೊಬ್ಬನ ಜೊತೆ ಅನೈತಿಕ ಸಂಬಂಧ ಹೊಂದಿದ್ದು, ಆತನೊಂದಿಗೆ ಪರಾರಿಯಾಗಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ಮೃತಪಟ್ಟ ವ್ಯಕ್ತಿಯನ್ನು ದಾಸರ್ (27) ಎಂದು ಗುರುತಿಸಲಾಗಿದೆ. ಎರಡು ದಿನಗಳ ಹಿಂದೆಯೇ ಟ್ಯಾಂಕ್‍ಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು ತಡವಾಗಿ ಬೆಳಕಿಗೆ ಬಂದಿದೆ. ನಲ್ಲಿಯಲ್ಲಿ ಬರುತ್ತಿದ್ದ ನೀರು ವಾಸನೆ ಬರುತ್ತಿದ್ದ ಕಾರಣ, ಟ್ಯಾಂಕ್‍ನ್ನು ಜನ ಪರಿಶೀಲಿಸಿದಾಗ ದಾಸರ್ ನ ಮೃತದೇಹ ಪತ್ತೆಯಾಗಿದೆ. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹ ಹೊರಗೆ ತೆಗೆದಿದ್ದಾರೆ.
ಕುಡಿಯುವ ನೀರಿನಲ್ಲಿ ಶವ ಪತ್ತೆಯಾದ ಹಿನ್ನೆಲೆ, ಟ್ಯಾಂಕ್ ನೀರು ಕುಡಿದು ಯಾರಿಗಾದರೂ ಆರೋಗ್ಯದ ಸಮಸ್ಯೆಯಾದರೆ ಅಗತ್ಯ ಚಿಕಿತ್ಸೆ ಪಡೆಯುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










