ಬೆಂಗಳೂರು: ಯುವತಿಯ ಕಾರು ಹಿಂಬಾಲಿಸಿ ಕಿರುಕುಳ ನೀಡಿದ ಆರೋಪದಡಿ ಇಬ್ಬರು ಆರೋಪಿಗಳನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೇಗೂರು ಮೂಲದ ಮಹಿಳೆ ನೀಡಿದ ದೂರು ಆಧರಿಸಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಘಟನೆಯಲ್ಲಿ ಮತ್ತೋರ್ವ ಭಾಗಿಯಾಗಿದ್ದು, ಆತನ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ. ಸದ್ಯ ಪೊಲೀಸ್ ವಶದಲ್ಲಿರುವ ಜಗನ್ನಾಥ್ ಹಾಗೂ ತೇಜಸ್ ಎಂಬುವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಮಡಿವಾಳ-ಕೋರಮಂಗಲ ರಸ್ತೆಯಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಕಾರಿನಲ್ಲಿ ಹೋಗುತ್ತಿದ್ದ ಯುವತಿಯನ್ನು, ಕಿಡಿಗೇಡಿಗಳು ಮಡಿವಾಳ, ಸೆಂಟ್ ಜಾನ್ಸ್ ನಿಂದ ಕೋರಮಂಗಲವರೆಗೂ ಹಿಂಬಾಲಿಸಿಕೊಂಡು ಹೋಗಿ ಕಿರುಕುಳ ನೀಡಿದ್ದಾರೆ. ಇದರಿಂದ ಆತಂಕಗೊಂಡ ಯುವತಿ ಸಹಾಯಕ್ಕಾಗಿ ಕೂಡಲೇ 112 ಸಹಾಯವಾಣಿಗೆ ಕರೆ ಮಾಡಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಅಲರ್ಟ್ ಆದ ಪೊಲೀಸರು ಯುವತಿ ಇದ್ದ ಜಾಗಕ್ಕೆ ಬಂದಿದ್ದಾರೆ. ಪೊಲೀಸರನ್ನು ಕಂಡೊಡನೆ ಪುಂಡರು ಎಸ್ಕೇಪ್ ಆಗಿದ್ದಾರೆ.
ಘಟನೆಯ ವೀಡಿಯೋ ಮತ್ತು ದುಷ್ಕರ್ಮಿಗಳ ವಾಹನ ಸಂಖ್ಯೆಯನ್ನು ಸಹ ಯುವತಿ ತಮಗೆ ನೀಡಿದ್ದರಿಂದ ಆರೋಪಿಗಳನ್ನು ಪತ್ತೆಹಚ್ಚಲು ಸಹಾಯ ಮಾಡಿತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










