ಬಂಟ್ವಾಳ (ದಕ್ಷಿಣ ಕನ್ನಡ): ಮೊಬೈಲ್ ಗೀಳು ಹಚ್ಚಿಕೊಂಡಿದ್ದ ಬಾಲಕನೋರ್ವ ಮಹಡಿ ಮೇಲಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಕಳೆದ ರಾತ್ರಿ ಬಂಟ್ವಾಳದಲ್ಲಿ ನಡೆದಿದೆ.
ಬಂಟ್ವಾಳದ ಜಕ್ರಿಬೆಟ್ಟು ನಿವಾಸಿ ದಿನೇಶ್ ಪೂಜಾರಿ ಪುತ್ರ ಆದಿಶ್(15) ಮೃತ ಬಾಲಕ. ಬಂಟ್ವಾಳ ಖಾಸಗಿ ಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿಯಾಗಿದ್ದ ಆದಿಶ್ಗೆ ಇತ್ತೀಚಿಗಷ್ಟೇ ಪರೀಕ್ಷೆಗಳು ಮುಗಿದಿದ್ದವು. ಆದಿಶ್ಗೆ ಮೊಬೈಲ್ ಗೀಳು ಇತ್ತು. ಅಂತೆಯೇ ಯಾವಾಗಲೂ ಮೊಬೈಲ್ನಲ್ಲೇ ಮುಳುಗಿರುತ್ತಿದ್ದನಂತೆ. ರಾತ್ರಿ ವೇಳೆ ಮೊಬೈಲ್ ನೋಡುತ್ತ ಹೋಗುವಾಗ ಆಯತಪ್ಪಿ ಮನೆಯ ಮೇಲಿಂದ ಕೆಳಗೆ ಬಿದ್ದು ಆದಿಶ್ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಮನೆಯವರಿಗೆ ಗೊತ್ತಿಲ್ಲದಂತೆ ಮೊಬೈಲ್ ಹಿಡಿದುಕೊಂಡು ಮನೆ ಮೇಲೆ ಹೋಗಿದ್ದ ವೇಳೆ ಕೆಳಗೆ ಬಿದ್ದಿದ್ದಾನೆ. ಘಟನೆಯಲ್ಲಿ ಆದಿಶ್ ನ ತಲೆಗೆ ಗಂಭೀರ ಗಾಯವಾಗಿದ್ದು, ತೀವ್ರ ರಕ್ತಸ್ರಾವವಾಗಿತ್ತು. ಆದಿಶ್ ನ ತಂದೆ ಬೆಳಗ್ಗೆ ಎದ್ದು ಹೊರಗೆ ಬಂದಾಗ ಆತ ಕೆಳಗೆ ಬಿದ್ದಿರುವುದು ಗಮನಕ್ಕೆ ಬಂದಿದೆ. ಮನೆ ಮೇಲಿಂದ ಬಟ್ಟೆ ತೊಳೆಯುವ ಕಲ್ಲಿನ ಮೇಲೆ ಬಾಲಕ ಬಿದ್ದಿರುವುದು ಕಂಡುಬಂದಿದೆ.
ಆದಿಶ್ಗೆ ರಾತ್ರಿ ವೇಳೆಯೂ ಮೊಬೈಲ್ ಬಳಕೆ ಹಾಗೂ ಟಿವಿ ನೋಡುವ ಅಭ್ಯಾಸ ಇತ್ತು ಎನ್ನಲಾಗಿದೆ. ಮನೆ ತಗ್ಗು ಪ್ರದೇಶದಲ್ಲಿರುವ ಕಾರಣಕ್ಕೆ ಪಿಲ್ಲರ್ ಹಾಕಿ ಮೇಲೆ ಮನೆ ನಿರ್ಮಿಸಿದ್ದರು.
ಘಟನೆಯ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










