ಬೆಂಗಳೂರು: ಅತ್ಯಾಚಾರ, ಜಾತಿ ನಿಂದನೆ ಹಾಗೂ ಗುತ್ತಿಗೆದಾರನಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಬಿಜೆಪಿ ಶಾಸಕ ಮುನಿರತ್ನ ಮನೆ ಮೇಲೆ ವಿಶೇಷ ತನಿಖಾ ತಂಡದ ಅಧಿಕಾರಿಗಳು ಇಂದು ಬೆಳಗ್ಗೆ ದಾಳಿ ನಡೆಸಿದರು. ಬೆಂಗಳೂರಿನ ವೈಯಾಲಿಕಾವಲ್ ನಿವಾಸದ ಮೇಲೆ ಎಸ್‍ಐಟಿ ಎಸಿಪಿ ಕವಿತಾ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳ ತಂಡ ದಾಖಲೆಗಳ ಪರಿಶೀಲನೆ ನಡೆಸಿದೆ. ವಿಧಿ ವಿಜ್ಞಾನ ಪ್ರಾಯೋಗಾಲಯದ ತಜ್ಞರನ್ನು ಕೂಡ ಜೊತೆಗೆ ಕರೆದೊಯ್ದಿದ್ದಿರುವ ಅಧಿಕಾರಿಗಳ ತಂಡ, ಮಹತ್ವದ ಮಾಹಿತಿ ಕಲೆಹಾಕಿದೆ. ಸದ್ಯ ಮೂರು ಕೇಸ್‍ಗಳ ಸಂಬಂಧ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ವೈಯಾಲಿಕಾವಲ್ ನಿವಾಸ ಸೇರಿದಂತೆ ಒಟ್ಟು 15 ಕಡೆಗಳಲ್ಲಿ ಎಸ್‍ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎಫ್‍ಎಸ್‍ಎಲ್ ತಂಡದ ಜತೆಗೇ ಎಸ್‍ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.










