ಬೋನಾಳ್ ಗ್ರಾಮದ 30 ಎಕರೆ ಸರ್ಕಾರಿ ಭೂಮಿ ಆಂಧ್ರ ಮೂಲದ ಪ್ರಭಾವಿಗಳಿಂದ ಒತ್ತುವರಿ.

26

ಯಾದಗಿರಿ: ಸುರಪುರ ತಾಲೂಕಿನ ಬೋನಾಳ್ ಗ್ರಾಮದ ಸರ್ಕಾರಿ ಭೂಮಿಯನ್ನು ಆಂಧ್ರಪ್ರದೇಶ ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದು, ತೆರವುಗೊಳಿಸುವಂತೆ ಗ್ರಾಮಸ್ಥರು ಮನವಿ ಸಲ್ಲಿಸಿದರೂ ಸಹ ಅಧಿಕಾರಿಗಳು ಮಾತ್ರ ಯಾವುದೆ ಕ್ರಮ ಕೈಗೊಳ್ಳಲು ಮುಂದಾಗದೆ ಇರುವುದು ಗ್ರಾಮಸ್ಥರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಬೋನಾಳ್ ಗ್ರಾಮದ ಭೂಮಿ ನೀರಾವರಿ ಪ್ರದೇಶ. ಗ್ರಾಮದಲ್ಲಿರುವ ಪ್ರತಿಯೊಬ್ಬ ರೈತರು ವರ್ಷಕ್ಕೆ ಎರಡು ಬಾರಿ ಭತ್ತವನ್ನು ಬೆಳೆದು ಸಮೃದ್ಧರಾಗಿದ್ದಾರೆ. ಈ ಭೂಮಿಗೆ ಸಾಕಷ್ಟು ಬೇಡಿಕೆಯಿದೆ ಹೀಗಾಗಿಯೇ ಈ ಗ್ರಾಮಕ್ಕೆ ಆಂಧ್ರ ಮೂಲದ ಜನ ಬಂದಿದ್ದಾರೆ. ಆಂಧ್ರಪ್ರದೇಶ ಮೂಲದ ಪ್ರಭಾವಿಗಳು ಆರಂಭದಲ್ಲಿ ಗ್ರಾಮದಲ್ಲಿರುವ ಕೆಲ ರೈತರ ಅಲ್ಪ ಜಮೀನು ಖರೀದಿ ಮಾಡಿಕೊಂಡು ಕೃಷಿ ಕಾರ್ಯ ಆರಂಭಿಸಿದ್ದಾರೆ. ಬಳಿಕ ಜಾಲಿ ಕಂಟಿ ಬೆಳೆದು ಪಾಳು ಬಿದ್ದ ಜಮೀನು ಕಂಡು, ಅದಕ್ಕೂ ಬೇಲಿ ಹಾಕಿದ್ದಾರೆ. ಗ್ರಾಮಸ್ಥರು ದಾಖಲೆಗಳನ್ನು ತೆಗೆದು ಪರಿಶೀಲನೆ ಮಾಡಿದಾಗ ಜಾಲಿ ಕಂಟಿ ಬೆಳೆದು ಪಾಳು ಬಿದ್ದಿದ್ದ ಜಮೀನು ಸರ್ಕಾರಿ ಜಮೀನು ಅಂತ ತಿಳಿದುಬಂದಿದೆ. ಆಂಧ್ರ ಮೂಲದ ಪ್ರಭಾವಿಗಳು ಸ್ಥಳೀಯ ಪ್ರಭಾವಿಗಳ ಜೊತೆ ಸೇರಿ ಸುಮಾರು 30 ಎಕರೆಗೂ ಅಧಿಕ ಸರ್ಕಾರಿ ಭೂಮಿಯನ್ನು ಲಪಾಟಿಯಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸರ್ಕಾರಿ ಜಮೀನನ್ನು ಆಂಧ್ರ ಮೂಲದ ಜನ ಒತ್ತುವರಿ ಮಾಡಿಕೊಂಡ ಬಗ್ಗೆ ಹಲವು ತಿಂಗಳುಗಳಿಂದ ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ತಂದು ಹೋರಾಟ ಮಾಡುತ್ತಿದ್ದಾರೆ. ಆದರೆ, ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮಸ್ಥರ ಮನವಿ ಸ್ಪಂದಿಸದೆ ಮೌನಕ್ಕೆ ಜಾರಿದ್ದು ಹಲವು ಅನುಮಾನಕ್ಕೆ ಕಾರಣವಾಗಿದೆ. ಪ್ರಾರಂಭದಲ್ಲಿ ಬೋನಾಳ್ ಗ್ರಾಮದ ರೈತರ ಜಮೀನು ಮಾತ್ರ ಖರೀದಿಸಿದ್ದ ಆಂಧ್ರದ ಪ್ರಭಾವಿಗಳು ನಂತರ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಖರೀದಿ ಮಾಡಿದ್ದಾರೆ. ಸ್ಥಳೀಯ ಪ್ರಭಾವಿಗಳು ಪಾಳು ಬಿದ್ದಿದ್ದ ಸರ್ಕಾರಿ ಜಮೀನು ಕೂಡ ಮಾರಾಟ ಮಾಡಿದ್ದಾರೆ. ಹಣ ಪಡೆದು ನಕಲಿ ದಾಖಲೆಗಳನ್ನ ಸೃಷ್ಟಿ ಮಾಡಿ ಮಾರಾಟ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಗ್ರಾಮದ ಪ್ರಭಾವಿಯೊಬ್ಬರು ಆಂಧ್ರ ಮೂಲದ ಶ್ರೀನಿವಾಸ್, ವೆಂಕಟೇಶ್ವರ, ಸೂರ್ಯನಾರಾಯಣಮ್ಮ, ಹಾಗೂ ಮಾರನಿ ಎಂಬವರಿಗೆ ಸುಮಾರು 30 ರಿಂದ 40 ಎಕರೆ ಜಮೀನು ನೀಡಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಸುರಪುರ ತಹಶೀಲ್ದಾರ ಗಮನಕ್ಕೆ ತಂದಿದ್ದಾರೆ. ತಹಶೀಲ್ದಾರ್ ಕಂದಾಯ ನಿರೀಕ್ಷಕರನ್ನು ಕಳುಹಿಸಿ ಪರಿಶೀಲನೆ ನಡೆಸಿದ್ದಾರೆ. ಕಂದಾಯ ನಿರೀಕ್ಷಕರು ಗ್ರಾಮದಲ್ಲಿ ಸರ್ಕಾರಿ ಜಮೀನು ಒತ್ತುವರಿಯಾಗಿದೆ ಅಂತ ವರದಿ ಸಹ ಕೊಟ್ಟಿದ್ದಾರೆ. ಇಷ್ಟೇಲ್ಲ ಆದರೂ ಮೇಲಾಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ.
ಒಟ್ನಲ್ಲಿ ಎಲ್ಲಿ ನೋಡಿದರೆ ಸರ್ಕಾರಿ ಭೂಮಿ ಒತ್ತುವರಿ ದಂಧೆ ಜೋರಾಗಿ ನಡೆಯುತ್ತಿದೆ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಕಾಡನ್ನೇ ಬಿಡದ ನುಂಗುಕೋರರು ಖಾಲಿ ಬಿದ್ದ ಜಾಗವನ್ನ ಹೇಗೆ ಬಿಡಲು ಸಾಧ್ಯ? ಅಂತ ಇದೆ ಪ್ರಕರಣ ನೋಡಿದರೆ ಗೊತ್ತಾಗುತ್ತೆ. ಹೀಗಾಗಿ ಅಧಿಕಾರಿಗಳು ತಮ್ಮ ಜಾಗವನ್ನು ಉಳಿಸಿಕೊಂಡು ಪ್ರಮಾಣಿಕತೆ ಮೆರೆಯಬೇಕಾಗಿದೆ.