ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್.

31

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಗಿಕೊಂಡಿರುವ ನಟ ದರ್ಶನ್‍ಗೆ 57 ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಜಾಮೀನು ಸಿಗಲಿಲ್ಲವಾದ ಕಾರಣ ದರ್ಶನ್ ಪರ ವಕೀಲರು ಹೈಕೋರ್ಟ್‍ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್‍ನಲ್ಲಿ ಇಂದು ಮೊದಲ ಬಾರಿಗೆ ವಿಚಾರಣೆ ನಡೆದಿದ್ದು, ಜಾಮೀನು ಅರ್ಜಿಯ ಮುಂದಿನ ವಿಚಾರಣೆಯನ್ನು ನ್ಯಾಯಮೂರ್ತಿಗಳು ಅಕ್ಟೋಬರ್ 28ಕ್ಕೆ ಮುಂದೂಡಿದ್ದಾರೆ. 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ದರ್ಶನ್ ಪರವಾಗಿ ವಾದ ಮಂಡಿಸಿದ್ದ ಸಿವಿ ನಾಗೇಶ್ ಅವರೇ ಹೈಕೋರ್ಟ್‍ನಲ್ಲಿಯೂ ದರ್ಶನ್ ಪರ ವಾದ ಮಂಡಿಸುತ್ತಿದ್ದಾರೆ.
ಹೈಕೋರ್ಟ್ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿರುವ ಪೀಠದಲ್ಲಿ ವಿಚಾರಣೆ ನಡೆದಿದ್ದು. ಸಿವಿ ನಾಗೇಶ್ ಅವರು ದರ್ಶನ್ ಪರವಾಗಿ ವಾದ ಮಂಡನೆ ಪ್ರಾರಂಭಿಸಿ ದರ್ಶನ್ ಅವರು ಬೆನ್ನು ನೋವಿನಿಂದ ಬಳಲುತ್ತಿದ್ದು, ಅವರನ್ನು ನಿನ್ನೆ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ದರ್ಶನ್‍ಗೆ ಚಿಕಿತ್ಸೆಯ ಅಗತ್ಯವಿದೆ. ಹಾಗಾಗಿ ಜಾಮೀನು ಕೋರುತ್ತಿದ್ದೇವೆ ಎಂದು ತಮ್ಮ ವಾದವನ್ನು ಮಂಡಿಸಿದರು. ಸಿವಿ ನಾಗೇಶ್ ಅವರ ವಾದವನ್ನು ಆಲಿಸಿದ ಹೈಕೋರ್ಟ್ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರು ನಂತರ ಜೈಲಧಿಕಾರಿಗಳಿಂದ ದರ್ಶನ್‍ರ ಆರೋಗ್ಯದ ಬಗ್ಗೆ ವರದಿಯನ್ನು ಕೇಳಿದರು. ಬಳಿಕ ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 28ಕ್ಕೆ ಮುಂದೂಡಿದರು.