ಬೆಂಗಳೂರು: ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳ ಬಣ್ಣ ಬಯಲಾಗುತ್ತಿದೆ. ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡಲು ಆ ಪಕ್ಷ ಹೊರಟಿದೆ ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತೀವ್ರವಾಗಿ ಕಿಡಿಕಾರಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿನ ಯಶಸ್ಸು ಮತ್ತು ಇದರಿಂದಾಗಿ ಏರುಗತಿಯಲ್ಲಿ ಸಾಗುತ್ತಿರುವ ರಾಜ್ಯದ ಆರ್ಥಿಕತೆಯನ್ನು ಕಂಡು ಬೆನ್ನುತಟ್ಟಿ ಪ್ರೊತ್ಸಾಹ ನೀಡಬೇಕಾಗಿದ್ದ ದೇಶದ ಪ್ರಧಾನಿ ಮೋದಿ ಅವರು ಒಬ್ಬ ರಾಜಕೀಯ ಪುಡಾರಿಯ ರೀತಿಯಲ್ಲಿ ಸುಳ್ಳು ಆರೋಪಗಳ ಮೂಲಕ ಕರ್ನಾಟಕ ರಾಜ್ಯಕ್ಕೆ ಮತ್ತು ಕನ್ನಡಿಗರಿಗೆ ಅವಮಾನ ಮಾಡುತ್ತಿರುವುದು ವಿಷಾದನೀಯ ಬೆಳವಣಿಗೆ ಎಂದು ಹೇಳಿದ್ದಾರೆ.
ನಮ್ಮ ಸರ್ಕಾರದ ಕಡೆಗೆ ಬೆರಳು ಮಾಡುವ ಮುನ್ನ ಬಿಜೆಪಿ ಪಕ್ಷದ ವಿನಾಶಕಾರಿ ಇತಿಹಾಸದ ಮೇಲೊಮ್ಮೆ ಕಣ್ಣಾಯಿಸಿ. ನಾವು ಜನರಿಗೆ ನೀಡಿದ್ದ ಪ್ರತಿ ಭರವಸೆಯನ್ನು ಈಡೇರಿಸಿದ್ದೇವೆ – ನಮ್ಮ 5 ಗ್ಯಾರಂಟಿ ಯೋಜನೆಗಳನ್ನು ರೂ.52,000 ಕೋಟಿಗೂ ಅಧಿಕ ಅನುದಾನದಲ್ಲಿ ಅನುಷ್ಠಾನಕ್ಕೆ ಕೊಟ್ಟಿದ್ದೇವೆ, ಇದರ ಜೊತೆಗೆ ನಾಡಿನ ಭವಿಷ್ಯ ರೂಪಿಸಲು ರೂ.52,903 ಕೋಟಿ ಅನುದಾನ ಬಳಸಲಾಗುತ್ತಿದೆ. ರಾಜ್ಯದಲ್ಲಿ ಅಧಿಕಾರದಲ್ಲಿದ್ದ ನಿಮ್ಮ ಪಕ್ಷದ ಸಾಧನೆ ಏನು? ಏಳು ಕೋಟಿ ಕನ್ನಡಿಗರ ಅಭಿವೃದ್ದಿಗಾಗಿ ವ್ಯಯವಾಗಬೇಕಾಗಿದ್ದ ಜನರ ಬೆವರ ಗಳಿಕೆಯ ತೆರಿಗೆ ಹಣವನ್ನು ಶೇ.40 ಕಮಿಷನ್ ರೂಪದಲ್ಲಿ ತಿಂದು ತೇಗಿದ್ದೇ? ಆದಾಯದ ಮೂಲಗಳನ್ನೆಲ್ಲ ಬರಿದು ಮಾಡಿ ರಾಜ್ಯವನ್ನು ಆರ್ಥಿಕವಾಗಿ ದಿವಾಳಿಯ ಅಂಚಿಗೆ ತಳ್ಳಿದ್ದೇ? ಈ ರೀತಿ ಲೂಟಿ ಮಾಡಿದ್ದ ಹಣದಲ್ಲಿ ನಿಮಗೂ ಪಾಲು ಸಂದಾಯವಾಗಿದೆ ಎಂದು ನಿಮ್ಮ ಬಿಜೆಪಿ ಪಕ್ಷದ ನಾಯಕರೇ ಮಾಡಿರುವ ಆರೋಪ ನಿಮ್ಮ ಗಮನಕ್ಕೂ ಬಂದಿರಬಹುದಲ್ಲವೇ? ನಿಮ್ಮ ನಾಯಕರು ಲೂಟಿ ಮಾಡುತ್ತಿದ್ದ ಶೇ.40 ಕಮಿಷನ್ ಹಣವನ್ನು ನಾವು ನೇರವಾಗಿ ಜನರಿಗೆ ತಲುಪಿಸುತ್ತಿದ್ದೇವೆ ಎಂದು ಬಿಜೆಪಿ ಪಕ್ಷದ ವಿರುದ್ದ ಕಿಡಿ ಕಾರಿದ್ದಾರೆ.










