ಬೆಂಗಳೂರು: ಬಗರ್ ಹುಕುಂ ಸಂಬಂಧಿತ ಅರ್ಜಿಗಳನ್ನು ನವೆಂಬರ್ 25 ರೊಳಗೆ ತೆರವುಗೊಳಿಸಬೇಕು, ಆದೇಶ ಪಾಲನೆಯಾಗದಿದ್ದಲ್ಲಿ ಎಲ್ಲರಿಗೂ ಶೋಕಾಸ್ ನೋಟಿಸ್ ನೀಡಲಾಗುವುದು ಎಂದು ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಅವರು ಸೂಚನೆ ನೀಡಿದ್ದಾರೆ. ಬಗರ್ ಹುಕುಂ ಅರ್ಜಿ ವಿಲೇವಾರಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ತಹಶೀಲ್ದಾರ್‍ಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಿನ್ನೆ ಸಂವಾದ ನಡೆಸಿದರು. ಬಗರ್ ಹುಕುಂ ಬಡವರ ಕೆಲಸ. ಬಡ ರೈತರಿಗೆ ಶೀಘ್ರ ಭೂ ಮಂಜೂರು ಮಾಡಬೇಕು ಎಂದು ರೈತಪರ ಸಂಘಟನೆಗಳು ದಶಕಗಳಿಂದ ಹೋರಾಡುತ್ತಿವೆ. ಈ ಬಗ್ಗೆ ಸರ್ಕಾರಕ್ಕೂ ಬದ್ಧತೆ ಇದ್ದು, ರೈತ ಹೋರಾಟಗಾರರ ದ್ವನಿಗೆ ಕಿವಿಗೊಡುವ ಅವರ ಸಮಸ್ಯೆಯನ್ನು ಆಲಿಸಿ ಪರಿಹರಿಸುವ ಜವಬ್ದಾರಿ ನನ್ನ ಮೇಲೂ ಇದೆ ಎಂದು ಹೇಳಿದರು,
ಬಗರ್ ಹುಕುಂ ಕೆಲಸಗಳಿಗೆ ಚುರುಕು ಮುಟ್ಟಿಸಬೇಕು ಎಂಬ ಕಾರಣದಿಂದಲೇ ನಾನು ಕಳೆದ ಒಂದು ವರ್ಷದಿಂದ ವ್ಯಯಕ್ತಿಕವಾಗಿ ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಕೈಗೊಂಡು ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಿದ್ದೇನೆ. ರಾಜ್ಯದ ಎಲ್ಲಾ ತಹಶೀಲ್ದಾರರ ಜೊತೆ ಪ್ರತಿ ತಿಂಗಳೂ ವಿಡಿಯೋ ಕಾನ್ಫರೆನ್ಸ್ ಮೂಲಕವೂ ಸಭೆ ನಡೆಸಿ ಪ್ರಗತಿ ಪರಿಶೀಲಿಸುತ್ತಿದ್ದೇನೆ. ಆದರೂ ಕೆಲವು ತಹಶೀಲ್ದಾರರು ಬಡವರ ಕೆಲಸದ ಬಗ್ಗೆ ಅಸಡ್ಡೆ ಧೋರಣೆ ತೋರುತ್ತಿರುವುದು ವಿಷಾದನೀಯ. ಬಡವರ ಕೆಲಸದ ಬಗ್ಗೆ ಅಧಿಕಾರಿ ವರ್ಗದಿಂದ ಈ ಮಟ್ಟದ ಅಸಡ್ಡೆಯನ್ನು ನಾನು ನಿರೀಕ್ಷಿಸಿರಲಿಲ. ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳು ನವೆಂಬರ್ 26 ರ ಬೆಳಗ್ಗೆಯೇ ಇಡೀ ಜಿಲ್ಲೆಯ ಪಟ್ಟಿಯನ್ನು ಒಂದುಗೂಡಿಸಿ ನನಗೆ ಸಲ್ಲಿಸಬೇಕು. ಡಿಸೆಂಬರ್ ಮೊದಲ ವಾರದಲ್ಲಿ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಅರ್ಹರಿಗೆ ಡಿಜಿಟಲ್ ಭೂ ಸಾಗುವಳಿ ಚೀಟಿ ನೀಡಬೇಕು ಎಂದು ಸೂಚನೆ ನೀಡಿದರು










