ಅನುದಾನ ಹಂಚಿಕೆಯಲ್ಲಿ ಅನ್ಯಾಯ, ಸ್ವಪಕ್ಷದ ವಿರುದ್ಧವೇ ಶಾಸಕ ಗವಿಯಪ್ಪ ಆಕ್ರೋಶ.

45

ಬೆಂಗಳೂರು: ಕಾಂಗ್ರೆಸ್ ಶಾಸಕ ರಾಜು ಕಾಗೆ ಬಳಿಕ ರಾಜ್ಯ ಸರ್ಕಾರದ ವಿರುದ್ಧ ಮತ್ತೊಬ್ಬ ಶಾಸಕ ತಿರುಗಿ ಬಿದ್ದಿದ್ದು, ಅನುದಾನ ವಿಚಾರ ಪ್ರಸ್ತಾಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ಕ್ಷೇತ್ರ ಅಭಿವೃದ್ಧಿ ಮಾಡಲು ಹಣ ಇಲ್ಲ. ನಮ್ಮದೇ ಸರ್ಕಾರ ಇದ್ದರೂ ಅನುದಾನ ಬಿಡುಗಡೆ ಆಗುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕ ಗವಿಯಪ್ಪ ಅವರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮ್ಮ ಸಚಿವರೇ ನಮಗೆ ಕಿಮ್ಮತ್ತು ಕೊಡುತ್ತಿಲ್ಲ. ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ವಿಧಾನಸೌಧದ ಮುಂದೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ. ನಾನು ಯಾವ ಪುರುಷಾರ್ಥಕ್ಕಾಗಿ ಶಾಸಕನಾಗಿರಬೇಕು ನಮ್ಮದೇ ಕ್ಷೇತ್ರದ ಜನರ ಸಮಸ್ಯೆಗಳಿಗೆ ನನ್ನಿಂದ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಆಡಳಿತ ಪಕ್ಷದ ಶಾಸಕರೇ ಈ ರೀತಿ ಹೇಳಿಕೊಳ್ಳಬೇಕಾದರೆ, ಪರಿಸ್ಥಿತಿ ಏನಾಗಿರಬೇಕು ಹೇಳಿ ಎಂದು ತಿಳಿಸಿದ್ದಾರೆ.
ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ದವೂ ಅಸಮಾಧಾನ ಹೊರ ಹಾಕಿರುವ ಅವರು, ಜಿಲ್ಲೆಗೆ ಬರುವ ಅನುದಾನದಲ್ಲಿ ಜಿಲ್ಲಾ ಕೇಂದ್ರದ ಅಭಿವೃದ್ಧಿಗೆ ಉಸ್ತುವಾರಿ ಸಚಿವರು ಶೇ.25ರಷ್ಟು ಅನುದಾನ ಮೀಸಲಿಡಬೇಕು. ಅದು ಜಿಲ್ಲಾ ಉಸ್ತುವಾರಿ ಸಚಿವರ ಕೈಯಲ್ಲಿ ಇರುತ್ತದೆ. ನಮ್ಮ ಜಿಲ್ಲಾ ಉಸ್ತುವಾರಿ ಜಮೀರ್ ಅಹ್ಮದ್ ಅವರು ಅದನ್ನು ಮಾಡಿಲ್ಲ. ಬೇಕಾದರೆ ಅವರ ವಿವೇಚನೆಗೆ ಬಂದಂತೆ ಅನುದಾನ ಬಳಸಲಿ. ನಾನು ಏನೂ ಕೇಳಲ್ಲ. ಒಟ್ಟಿನಲ್ಲಿ ನನ್ನ ಕ್ಷೇತ್ರದಲ್ಲಿ ಕೆಲಸ ಆಗಬೇಕು ಎಂದು ಅಸಮಾಧಾನ ಹೊರ ಹಾಕಿದರು.