ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಹೆಚ್ಚಾಗುತ್ತಿರುವ ಆಂತರಿಕ ಕಚ್ಚಾಟದ ನಡುವೆ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಬುಧವಾರ ನವದೆಹಲಿಯಲ್ಲಿ ಭೇಟಿ ಮಾಡಿದ್ದಾರೆ. ಭಿನ್ನಮತೀಯ ನಾಯಕರು ನಡೆಸುತ್ತಿರುವ ಚಟುವಟಿಕೆಗಳಿಗೆ ಲಗಾಮು ಹಾಕುವಂತೆ ಮನವಿ ಮಾಡಿದ್ದಾರೆಂದು ತಿಳಿಸಲಾಗಿದೆ. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ತಂಡಕ್ಕೆ ಬ್ರೇಕ್ ಹಾಕಿ ಎಂದು ಮನವಿ ಮಾಡಿದ್ದಾರೆ. ಇದೇ ವೇಳೆ, ರಾಜ್ಯದಲ್ಲಿ ಕಳೆದೊಂದು ವರ್ಷದ ಪಕ್ಷ ಸಂಘಟನೆ, ಹೋರಾಟದ ಬಗ್ಗೆ ರಿಪೋರ್ಟ್ ಸಲ್ಲಿಕೆ ಮಾಡಲಾಗಿದೆ. ತಮ್ಮ 1 ವರ್ಷದ ಸಾಧನೆಯ ವರದಿ ಕೊಡುವ ಮೂಲಕ ಕುತೂಹಲ ಹುಟ್ಟಿಸಿದ್ದಾರೆ. ಯತ್ಬಾಳ್ ತಂಡದ 2ನೇ ಹಂತದ ವಕ್ಫ್ ಹೋರಾಟ ವಿಚಾರವನ್ನು ಹೈಕಮಾಂಡ್ ಗಮನಕ್ಕೆ ತಂದರು. ಈ ವರ್ಷದ ಆರಂಭದಿಂದ ಪಕ್ಷದ ವತಿಯಿಂದ ಕೈಗೊಳ್ಳಲಿರುವ ಹೋರಾಟಗಳ ಕುರಿತು ಪ್ರತ್ಯೇಕ ಮಾಹಿತಿ ಕೂಡ ಸಲ್ಲಿಸಿದ್ದಾರೆ. ಸಚಿನ್ ಆತ್ಮಹತ್ಯೆ ಪ್ರಕರಣಕ್ಕೂ ಪ್ರಿಯಾಂಕ್ ಖರ್ಗೆಗೂ ಸಂಬಂಧ ಇರುವ ಕುರಿತು ವರದಿ ನೀಡಿದ್ದಾರೆ. ಪ್ರಕರಣದಲ್ಲಿ ಬಿಜೆಪಿಯ ಹೋರಾಟ, ಕಲಬುರ್ಗಿ ಪ್ರತಿಭಟನೆ ಕುರಿತು ತಿಳಿಸಿದ್ದಾರೆ. ಹಾಗೂ ಬಾಣಂತಿಯರ ಸರಣಿ ಸಾವು ಪ್ರಕರಣದಲ್ಲಿ ಸರ್ಕಾರದ ಲೋಪಗಳು, ನಿರ್ಲಕ್ಷ್ಯ, ಬಿಜೆಪಿ ಹೋರಾಟ ಕುರಿತೂ ಗಮನ ಸೆಳೆದಿದ್ದಾರೆ. ಅಮಿತ್ ಶಾ ಅವರನ್ನು ಭೇಟಿಯಾದ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು, ಉಕ್ಕಿನ ಮನುಷ್ಯ ಎಂದು ಬಣ್ಣಿಸಲ್ಪಡುವ ಸರ್ದಾರ್ ವಲ್ಲಭಾಯಿ ಪಟೇಲರ ಬಳಿಕ ದೇಶಕಂಡ ದಿಟ್ಟ ಗೃಹ ಸಚಿವ ಅಮಿತ್ ಶಾ ಅವರನ್ನು ಹೊಸವರ್ಷದ ದಿನದಂದು ನವದೆಹಲಿಯಲ್ಲಿ ಭೇಟಿಯಾಗಿ ಶುಭಾಶಯ ಕೋರಿ ಆಶೀರ್ವಾದ ಪಡೆಯಲಾಯಿತು.










