ತಿರುಪತಿ ಲಡ್ಡು ಪ್ರಕರಣ: ನಾಲ್ವರು ಡೈರಿ ಮುಖ್ಯಸ್ಥರ ಬಂಧನ.

34

ತಿರುಪತಿ: ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಕ್ತರಿಗೆ ಪ್ರಸಾದವಾಗಿ ನೀಡಲಾಗುವ ಪ್ರಸಿದ್ಧ ತಿರುಪತಿ ಲಡ್ಡುಗಳನ್ನು ಕಲಬೆರಕೆ ಮಾಡಿದ ಆರೋಪದ ಮೇಲೆ ಸಿಬಿಐ ನೇತೃತ್ವದ ವಿಶೇಷ ತನಿಖಾ ತಂಡವು ನಾಲ್ವರನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ತನಿಖೆ ನಡೆಸಿದ್ದ ಹೈದರಾಬಾದ್ ವಿಭಾಗದ ಜಂಟಿ ನಿರ್ದೇಶಕ ವೀರೇಶ್ ಪ್ರಭು, ವಿಶಾಖಪಟ್ಟಣಂ ಸಿಬಿಐ ಎಸ್ಪಿ ಮುರಳೀರಾಂಬ, ವಿಶಾಖಪಟ್ಟಣಂ ಡಿಐಜಿ ಗೋಪಿನಾಥ್ ಜೆಟ್ಟಿ, ಗುಂಟೂರು ಐಜಿ ಸರ್ವಶ್ರೇಷ್ಠಿ ತ್ರಿಪಾಠಿ ಮತ್ತು ಎಫ್‍ಎಸ್‍ಎಸ್‍ಎಐ ಅಧಿಕಾರಿ ಸತ್ಯಕುಮಾರ್ ಪಾಂಡಾ ನೇತೃತ್ವದ ತಂಡ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಭೋಲೆ ಬಾಬಾ ಡೈರಿಯ ಮಾಜಿ ನಿರ್ದೇಶಕರಾದ ವಿಪಿನ್ ಜೈನ್ ಮತ್ತು ಪೊಮಿಲ್ ಜೈನ್, ವೈಷ್ಣವಿ ಡೈರಿಯ ಸಿಇಒ ಅಪೂರ್ವ ವಿನಯ್ ಕಾಂತ್ ಚಾವ್ಡಾ ಮತ್ತು ಎಆರ್ ಡೈರಿ ಎಂಡಿ ರಾಜು ರಾಜಶೇಖರನ್ ಬಂಧಿತರಾಗಿರುವ ಆರೋಪಿಗಳಾಗಿದ್ದಾರೆ. ಎಲ್ಲಾ ಆರೋಪಿಗಳನ್ನು ವಶಕ್ಕೆ ಪಡೆದಿರುವ ಎಸ್‍ಐಟಿ ಅಧಿಕಾರಿಗಳು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತನಿಖಾ ತಂಡ ತಿಳಿಸಿದೆ. ಮೂಲಗಳ ಪ್ರಕಾರ ಆರೋಪಿಗಳನ್ನು ಅಪರಾಧ ಸಂಖ್ಯೆ 470/24 ರ ಅಡಿಯಲ್ಲಿ ಬಂಧಿಸಿ ತಿರುಪತಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ತನಿಖೆಯಲ್ಲಿ ತುಪ್ಪ ಪೂರೈಕೆಯಲ್ಲಿ ಪಾಲಿಸಬೇಕಾದ ನಿಯಮಗಳ ಉಲ್ಲಂಘನೆಯಾಗಿರುವುದು ಬಹಿರಂಗವಾಗಿದೆ. ಇದರಲ್ಲಿ ಟೆಂಡರ್ ಪಡೆಯಲು ನಕಲಿ ದಾಖಲೆಗಳು ಮತ್ತು ಸ್ಟ್ಯಾಂಪ್‍ಗಳನ್ನು ಬಳಸಿರುವುದು ಕೂಡ ಸೇರಿಕೊಂಡಿದೆ. ವೈಷ್ಣವಿ ಡೈರಿಯು ಭೋಲೆ ಬಾಬಾ ಡೈರಿಯ ತುಪ್ಪ ಪೂರೈಕೆಯ ನಿಯಮಗಳನ್ನು ತಿರುಚಿರುವುದು ಬೆಳಕಿಗೆ ಬಂದಿದೆ. ವಿಚಾರಣೆಯಲ್ಲಿ ಪೂರೈಕೆಯಲ್ಲಿ ಹಲವು ವ್ಯತ್ಯಾಸಗಳು ಮತ್ತು ಸುಳ್ಳು ದಾಖಲೆಗಳನ್ನು ನೀಡಿರುವುದು ಕಂಡುಬಂದಿವೆ.