ಚಿಕ್ಕಮಗಳೂರು: ಕಳೆದ ಐದು ವರ್ಷಗಳ ಅವಧಿಯಲ್ಲಿ ಒಮ್ಮೆಯೂ ಕ್ಷೇತ್ರದತ್ತ ತಿರುಗಿ ನೋಡದ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಕ್ಷೇತ್ರದ ಜನತೆ ಈ ಬಾರಿಯ ಚುನಾವಣೆಯಲ್ಲಿ ಸಾರಾಸಗಟಾಗಿ ತಿರಸ್ಕರಿಸಬೇಕು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹೆಚ್.ಹೆಚ್.ದೇವರಾಜ್ ಕರೆ ನೀಡಿದರು.
ನಗರದ ಜೆಡಿಎಸ್ ಕಛೇರಿಯಲ್ಲಿ ಶುಕ್ರವಾರ ನಡೆದ ಲೋಕಸಭಾ ಚುನಾವಣೆಯ ಸಿದ್ದತಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶೋಭಾ ಕರಂದ್ಲಾಜೆ ಅವರು ಸಂಸದರಾಗಿ ಆಯ್ಕೆಯಾದ ನಂತರ ಕ್ಷೇತ್ರದತ್ತ ಒಮ್ಮೆಯೂ ತಿರುಗಿ ನೋಡಲಿಲ್ಲ ಜಿಲ್ಲೆಯಲ್ಲಿ ಅತಿವೃಷ್ಠಿ ಮತ್ತು ಅನಾವೃಷ್ಠಿಯಿಂದ ರೈತರು ಮತ್ತು ಬೆಳೆಗಾರರು ತತ್ತರಿಸುತ್ತಿದ್ದರೂ ಕ್ಷೇತ್ರದಲ್ಲಿ ಹಲವಾರು ಜ್ವಲಂತ ಸವiಸ್ಯೆಗಳಿದ್ದರೂ ಅವುಗಳ ಬಗ್ಗೆ ಲೋಕಸಭೆಯಲ್ಲಿ ಧ್ವನಿ ಎತ್ತಲಿಲ್ಲ ಎಂದು ಆರೋಪಿಸಿದರು.
ಐದು ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ ಕ್ಷೇತ್ರಕ್ಕೆ ಒಂದೇ ಒಂದು ರೂಪಾಯಿ ಹಣವನ್ನು ಸಹ ತರಲಿಲ್ಲ ಯಾವುದೇ ಅಭಿವೃದ್ದಿ ಕೆಲಸವನ್ನೂ ಮಾಡಲಿಲ್ಲ ಜನರ ಸಮಸ್ಯೆಗಳನ್ನುಆಲಿಸಲು ಜಿಲ್ಲೆಯಲ್ಲಿ ಕನಿಷ್ಠ ಮನೆಯನ್ನೂ ಮಾಡಲಿಲ್ಲ ಎಂದ ದೇವರಾಜ್ ನಯಾಪೈಸೆಯಷ್ಟೂ ಕೆಲಸ ಮಾಡದ ಶೋಭಾ ಕರಂದ್ಲಾಜೆ ಅವರು ಮತ್ತೆ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದನ್ನು ನೋಡಿದರೆ ಅವರು ಕ್ಷೇತ್ರದ ಜನತೆಯನ್ನು ಲಘುವಾಗಿ ಪರಿಗಣಿಸಿದಂತೆ ಕಾಣುತ್ತದೆ ಎಂದರು.
ಈ ಹಿನ್ನೆಲೆಯಲ್ಲಿ ಕ್ಷೇತ್ರದ ಎಲ್ಲಾ ಜಾತ್ಯಾತೀತ ಪಕ್ಷಗಳೂ ಮತ್ತು ಜೆಡಿಎಸ್ ಕಾರ್ಯಕರ್ತರು ಶೋಭಾ ಅವರ ವಿರುದ್ದ ಒಗ್ಗೂಡಿ ಕೆಲಸ ಮಾಡಬೇಕು, ಈಗಾಗಲೇ ಬಿಜೆಪಿಯವರು ಗೋ ಬ್ಯಾಕ್ ಶೋಭಾ ಚಳುವಳಿ ನಡೆಸುತ್ತಿದ್ದು, ಅದಕ್ಕೆ ಕ್ಷೇತ್ರದ ಜನತೆ ಕೈಜೋಡಿಸಬೇಕು, ಜೆಡಿಎಸ್ ಕಾಂಗ್ರೇಸ್ ಮೈತ್ರಿ ಕೂಟದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧ್ಯಕ್ಷ ರಂಜನ್ ಅಜಿತ್‍ಕುಮಾರ್ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಕೂಟದ ಅಭ್ಯರ್ಥಿಯ ಗೆಲುವಿಗೆ ಪಕ್ಷದ ಕಾರ್ಯಕರ್ತರು ಪಣ ತೊಡಬೇಕು ಎಂದು ಕರೆ ನೀಡಿದರು.
ಮೈತ್ರಿ ಕೂಟದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಕ್ಷೇತ್ರದ ಜನತೆ ಜನಪರವಾಗಿ ಕೆಲಸ ಮಾಡುತ್ತಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಕೈಬಲ ಪಡಿಸಬೇಕು ಎಂದು ಮನವಿ ಮಾಡಿದರು.
ಪಕ್ಷದ ಮುಖಂಡರಾದ ಜಿ.ಎಸ್.ಚಂದ್ರಪ್ಪ, ಎಂ.ಎಸ್.ಬಾಲಕೃಷ್ಣೇಗೌಡ, ಎಂ.ಡಿ.ರಮೇಶ್, ಡಿ.ಕೆ.ಚಂದ್ರೇಗೌಡ, ನಿಸಾರ್ ಅಹಮದ್, ಮಾನು ಮಿರಾಂಡ, ವಿನಯ್ ಕೋಟೆ, ಜ್ಯೋತಿ ಈಶ್ವರ್, ಶ್ರೀದೇವಿ, ದಿನೇಶ್, ಹೆಚ್.ಎನ್.ಕೃಷ್ಣೇಗೌಡ, ಮಲ್ಲೇದೇವರಪ್ಪ, ಉಮಾಪತಿ ಸಭೆಯಲ್ಲಿ ಹಾಜರಿದ್ದರು.
Home ಸ್ಥಳಿಯ ಸುದ್ದಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಕೂಟದ ಅಭ್ಯರ್ಥಿಯ ಗೆಲುವಿಗೆ ಪಕ್ಷದ ಕಾರ್ಯಕರ್ತರು ಪಣ ತೊಡಬೇಕು:...










