Bengaluru Audi accident : ಪೊಲೀಸರ ಮೇಲೆ ಕಾರು ಹರಿಸಲು ಯತ್ನ, ಕೂದಲೆಳೆ ಅಂತರದಲ್ಲಿ ಡೆಲಿವರಿ ಬಾಯ್ ಬಚಾವ್?

86
firstsuddi

ಬೆಂಗಳೂರು : ನಗರದ ಕೋರಮಂಗಲದಲ್ಲಿ ನಡೆದ ಭೀಕರ ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದು, ಸ್ಫೋಟಕ ಮಾಹಿತಿಯೊಂದು ಬೆಳಕಿಗೆ ಬಂದಿದೆ. ಅವಘಡ ಸಂಭವಿಸುವ ಮುನ್ನ ಗಸ್ತು ಪೊಲೀಸರು ಹಾಗೂ ಜೊಮ್ಯಾಟೋ ಡೆಲಿವರಿ ಬಾಯ್ ಪ್ರಾಣಾಪಾಯದಿಂದ ಪಾರಾಗಿರುವುದು ತಿಳಿದುಬಂದಿದೆ.

ಜಿಗ್ ಜ್ಯಾಗ್ ರೀತಿಯಲ್ಲಿ ಕಾರು ಚಲಾಯಿಸಿದ್ದ ಯುವಕರ ಗುಂಪು ಕೋರಮಂಗಲದಲ್ಲೇ ಸುಮಾರು ಒಂದು ಗಂಟೆ ಕಾಲ ಸುತ್ತಾಡಿದ್ದಾರೆ. ಕೋರಮಂಗಲ ಚೆಕ್ ಪೋಸ್ಟ್ ಬಳಿಯೂ ಪೊಲೀಸರು ಕಾರು ತಡೆದು ಎಚ್ಚರಿಕೆ ಕೊಟ್ಟಿದ್ದರು. ಆದರೆ, ಅಲ್ಲಿಂದ ಸುಮ್ಮನೆ ತೆರಳಿದ್ದ ಯುವಕರು ಎನ್ ಜಿವಿ ಸಿಗ್ನಲ್ ಬಳಿ ಕಾರನ್ನು ತಡೆಯಲು ಹೋದಾಗ ಪೊಲೀಸರ ಮೇಲೆ ಕಾರು ಹತ್ತಿಸಲು ಯತ್ನಿಸಿದ್ದಾರಂತೆ. ಅಲ್ಲದೇ ಸೋನಿ ವರ್ಲ್ಡ್ ಟ್ರಾಫಿಕ್ ಸಿಗ್ನಲ್ ಬಳಿ ಕಾರನ್ನು ಅತೀ ವೇಗವಾಗಿ ಚಾಲನೆ ಮಾಡುತ್ತಿದ್ದ ಶಾಸಕರ ಪುತ್ರ ಮತ್ತು ಸ್ನೇಹಿತರಿದ್ದ ಕಾರಿನಿಂದ ಜೊಮ್ಯಾಟೊ ಡೆಲಿವರಿ ಬಾಯ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದ ಎನ್ನಲಾಗುತ್ತಿದೆ.

ಇನ್ನೊಂದೆಡೆ, ಅಪಘಾತ ಆಗಿರುವ ಕಾರಿನಲ್ಲಿ 3 ಮೊಬೈಲ್ ಪೋನ್ ಗಳು ಮಾತ್ರ ಸಿಕ್ಕಿವೆ. ಆದರೆ, ಆ ಮೂರೂ ಮೊಬೈಲ್ ಪೋನ್ ಗಳ ಡಿಸ್ ಪ್ಲೇ ಒಡೆದು ಹೋಗಿದೆ. ಇದರಿಂದ ಮೊಬೈಲ್ ಕಾಲ್ ಲಿಸ್ಟ್ ಆಧರಿಸಿ ಟವರ್ ಲೊಕೇಷನ್ ಮೂಲಕ ಪಾರ್ಟಿ ನಡೆದ ಸ್ಥಳ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಕೋರಮಂಗಲದ ಎಲ್ಲಾ ಬಾರ್ ಅಂಡ್ ರೆಸ್ಟೋರೆಂಟ್, ಪಬ್ ಪರಿಶೀಲನೆ ಮಾಡಲಾಗುತ್ತಿದ್ದು, ಈವರೆಗೆ ಕೋರಮಂಗಲದಲ್ಲಿ ಎಲ್ಲಿಯೂ ಪಾರ್ಟಿ ಮಾಡಿರುವ ವಿಚಾರ ಪತ್ತೆಯಾಗಿಲ್ಲ. ಹೀಗಾಗಿ ಎಂಜಿ ರೋಡ್ ಸುತ್ತಮುತ್ತ ಪಾರ್ಟಿ ಮಾಡಿರುವ ಅನುಮಾನವೂ ಇದ್ದು, ಸದ್ಯ ಎಂಜಿ ರಸ್ತೆಯ ಪಬ್, ಬಾರ್ ಅಂಡ್ ರೆಸ್ಟೋರೆಂಟ್ ಬಳಿಯ ಸಿಸಿ ಕ್ಯಾಮರಾ ಪರಿಶೀಲನೆ ಮಾಡಲಾಗುತ್ತಿದೆ.

ಬಹುತೇಕ ಕುಡಿದು ವಾಹನ ಚಲಾಯಿಸಿರುವ ಸಾಧ್ಯತೆಯೇ ಜಾಸ್ತಿ ಇದ್ದು, ಈಗಾಗಲೇ ಮೃತರ ರಕ್ತದ ಮಾದರಿಯನ್ನು ಸಂಗ್ರಹ ಮಾಡಲಾಗಿದೆ. ಒಂದೆರಡು ದಿನದಲ್ಲಿ ವೈದ್ಯಕೀಯ ಪರೀಕ್ಷೆಯ ವರದಿ ಬರುವ ನಿರೀಕ್ಷೆಯಿದೆ.