ಚಿಕ್ಕಮಗಳೂರಿನ ದತ್ತಪೀಠವನ್ನು ಬಿಜೆಪಿ ಸರ್ಕಾರ ಕೂಡಲೇ ಹಿಂದೂಗಳಿಗೆ ಹಸ್ತಾಂತರಿಸಬೇಕು : ಪ್ರಮೋದ್ ಮುತಾಲಿಕ್.

146
firstsuddi

ಬೆಳಗಾವಿ : ಚಿಕ್ಕಮಗಳೂರಿನ ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸುವ ಬುದ್ದಿ ಬಿಜೆಪಿ ಪಕ್ಷಕ್ಕೇ ಶೀಘ್ರವೇ ಬರಲಿ ಎಂದು ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಹೇಳಿದ್ದಾರೆ. ಹುಕ್ಕೇರಿಯ ದತ್ತಮಂದಿರದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕಮಗಳೂರು ತಾಲ್ಲೂಕು ಬಾಬಾಬುಡನ್ ಗಿರಿಯಲ್ಲಿ ಇರುವ ದತ್ತಪೀಠವನ್ನು ಬಿಜೆಪಿ ಸರ್ಕಾರ ಕೂಡಲೇ ಹಿಂದೂಗಳಿಗೆ ಹಸ್ತಾಂತರಿಸಬೇಕು. ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸುವ ಬುದ್ಧಿ ಬಿಜೆಪಿ ಪಕ್ಷಕ್ಕೆ ಬರಲಿ. ದತ್ತಾತ್ರೇಯ ಅನುಗ್ರಹದಿಂದ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಈ ವಿಷಯದಲ್ಲಿ ನಿರ್ಲಕ್ಷ ವಹಿಸಿದರೆ ಅದಕ್ಕೆ ದತ್ತನ ಶಾಪ ತಟ್ಟಲಿ ಎಂದು ಆಕ್ರೋಶ ಹೊರಹಾಕಿದರು.

ಅಲ್ಲದೇ ಸಿ.ಟಿ. ರವಿ, ಸುನೀಲ್ ಕುಮಾರ್ ಅವರು ದತ್ತಾಪೀಠ ಹೋರಾಟದಿಂದಲೇ ಶಾಸಕರು ಹಾಗೂ ಸಚಿವರಾದವರು. ಆದರೆ ದತ್ತಪೀಠಕ್ಕೆ ಮುಕ್ತಿ ಕೊಡುವ ಕೆಲಸವನ್ನು ಬಿಜೆಪಿ ನಾಯಕರು ಮಾಡುತ್ತಿಲ್ಲ. ದತ್ತಪೀಠವನ್ನು ಹಿಂದೂಗಳಿಗೆ ನೀಡಬೇಕು. ಅಲ್ಲಿರುವ ಸಮಾಧಿಗಳನ್ನು ಸ್ಥಳಾಂತರಿಸಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ಮುಂದುವರೆಯುತ್ತಲೇ ಇರುತ್ತದೆ ಎಂದು ಹೇಳಿದರು.