ಚಿಕ್ಕಮಗಳೂರು : ಇಡೀ ವಿಶ್ವದಾಧ್ಯಂತ ಭೀತಿ ಹೆಚ್ಚಿಸಿರುವ ಮಹಾಮಾರಿ ಕೊರೊನಾ ವೈರಸ್ ಈಗಾ ಕರ್ನಾಟಕದಲ್ಲೂ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ, ಜಿಲ್ಲೆಯ ಜನತೆಯ ಆರೋಗ್ಯದ ಹಿತ ಕಾಪಾಡಿಕೊಳ್ಳುವ ದೃಷ್ಠಿಯಿಂದ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಪ್ರವಾಸಿಗರು ಬರದಂತೆ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರು ಮನವಿ ಮಾಡಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊರೊನಾ ವೈರಸ್ ಭೀತಿಯಿಂದ ಈಗಾಗಲೇ ಶೇ. 80 ರಷ್ಟು ಪ್ರವಾಸಿಗರು ಜಿಲ್ಲೆಗೆ ಬರುವುದು ಕಡಿಮೆಯಾಗಿದೆ. ಆದರೂ, ಪ್ರವಾಸಕ್ಕೆಂದು ಯಾವುದೇ ಪ್ರವಾಸಿಗರು ಬಂದರೆ ಅದು ಜಿಲ್ಲೆಯ ಜನರ ಆರೋಗ್ಯದ ಹಿತದೃಷ್ಠಿಯಲ್ಲಿ ನಿಯಂತ್ರಿಸಬೇಕಾಗಿರುವುದರಿಂದ ಹೊರಗಡೆಯವರು ಜಿಲ್ಲೆಗೆ ಬರುವುದನ್ನು ಮುಂದೂಡಬೇಕು ಎಂದು ಮನವಿ ಮಾಡಿದರು.
ಈ ಕುರಿತು ಈಗಾಗಲೇ ಹಲವರು ಪ್ರವಾಸಿಗರ ನಿಯಂತ್ರಣಕ್ಕೆ ಮನವಿ ಮಾಡಿದ್ದು, ಪ್ರವಾಸಿಗಳು ಯಾರೂ ಧಾರ್ಮಿಕ, ನೇಚರ್ ಹಾಗೂ ಇತರೆ ಯಾವುದೇ ಪ್ರವಾಸೋಧ್ಯಮಕ್ಕೆ ಬರದಿರಲು ಅವರು ತಿಳಿಸಿ, ಕೊರೊನಾ ವೈರಸ್ ಭೀತಿಯಿಂದ ಮುಳ್ಳಯ್ಯನ ಗಿರಿ, ಕೆಮ್ಮಣ್ಣು ಗುಂಡಿ, ದತ್ತಪೀಠ ಭಾಗಕ್ಕೆ ತೆರಳುವವೆ ಸಂಖ್ಯೆ ಬಹುತೇಕ ಕಡಿಮೆಯಾಗಿದೆ. ಜಿಲ್ಲೆಯ ಸರ್ಕಾರಿ ಶುಶ್ರೂಷಕಿಯರು, ವೈದ್ಯರುಗಳು, ಅರೆವೈದ್ಯಕೀಯ ಸಿಬ್ಬಂದಿಗಳು ಮತ್ತು ಸಹಾಯಕರಿಗೆ ಕೊರೊನಾ ವೈರಸ್ ಪೀಡಿತರ ಬಗ್ಗೆ ಈಗಾಗಲೇ ತರಬೇತಿ ನೀಡಿದ್ದು, ಖಾಸಗಿ ಆಸ್ಪತ್ರೆಗಳ ನೆರವೂ ಕೂಡಾ ಪೂರ್ಣ ಪ್ರಮಾಣದಲ್ಲಿ ವೈರಸ್ ತಡೆಗಟ್ಟಲು ಬೇಕಾಗಿದ್ದರಿಂದ ಖಾಸಗಿ ಆಸ್ಪತ್ರೆಗಳ ಸಿಬ್ಬಂದಿಗಳಿಗೂ 2-3 ದಿನಗಳಲ್ಲಿ ತರಬೇತಿ ನೀಡಲಾಗುವುದೆಂದು ತಿಳಿಸಿದರು.
ಜಿಲ್ಲೆಯಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ 38 ಹಾಸಿಗೆಗಳುಳ್ಳ ಬೇರ್ಪಡಿಸಿದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಜಿಲ್ಲೆಯ 19 ನರ್ಸಿಂಗ್ ಹೋಂಗಳಲ್ಲಿ ಒಟ್ಟು 74 ಹಾಸಿಗೆಗಳ ಬೇರ್ಪಡಿಸುವ ವಾರ್ಡ್‍ಗಳನ್ನು ಸಿದ್ಧಪಡಿಸಲಾಗಿದೆ. ದೇಶಕ್ಕೆ ಮತ್ತು ನಮ್ಮ ರಾಜ್ಯಕ್ಕೆ ಆಗಮಿಸುವ ಹೊರ ದೇಶದಿಂದ ಬರುವ ಯಾವುದೇ ವ್ಯಕ್ತಿಗಳನ್ನು ಕಣ್ಗಾವಲು ಮಾಡಬೇಕಾಗಿದ್ದು, ಜಿಲ್ಲೆಗೆ ಹೊರ ದೇಶದಿಂದ ಬರುವ ವ್ಯಕ್ತಿಗಳ ಬಗ್ಗೆ ಕೂಡಲೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಕೊರೊನಾ ವೈರಸ್ ಹರಡುವುದು ತಡೆಯುವುದೇ ಮುಖ್ಯವಾಗಿದ್ದರಿಂದ ಹೆಚ್ಚಾಗಿ ಜನರು ಸೇರುವ ಸಭೆ ಸಮಾರಂಭಗಳಿ, ಸಿನಿಮಾ ಮಂದಿರಗಳು, ಮಾಲ್‍ಗಳು, ಪಬ್‍ಗಳು, ರಾತ್ರಿ ಕ್ಲಬ್‍ಗಳು, ವಿವಿಧ ಕ್ರೀಡಾ ಸ್ಪರ್ಧೆಗಳು, ಹೆಚ್ಚು ಜನರು ಸೇರುವ ಮದುವೆಗಳು, ಹೆಚ್ಚು ಜನರು ಸೇರುವ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಜಾತ್ರೆಗಳನ್ನು ನಿಯಂತ್ರಿಸಬೇಕು. ಶಾಲಾ ಕಾಲೇಜುಗಳನ್ನು ಮುಚ್ಚುವುದು, ಶುಚಿತ್ವವನ್ನು ಕಾಪಾಡುವುದು, ಕೈಗಳನ್ನು ಶುಚಿಯಾಗಿ ತೊಳೆದುಕೊಳ್ಳುವುದು ಸೇರಿದಂತೆ ರೋಗ ತಡೆಗಟ್ಟುವ ವಿಧಾನಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವುದು ರೋಗ ನಿಯಂತ್ರಣಕ್ಕೆ ಸರ್ಕಾರ ಆದೇಶಿಸಿರುವ ಕ್ರಮಗಳಾಗಿದ್ದು, ಎಲ್ಲರೂ ಅದನ್ನು ಅನುಸರಿಸಬೇಕು. ವಿವಿಧ ತರಹದ ಮಾಸ್ಕ್‍ಗಳನ್ನು ಎಂ.ಆರ್.ಪಿ ಗಿಂತ ಹಚ್ಚು ದರದಲ್ಲಿ ಮಾರಾಟ ಮಾಡುವಂತಿಲ್ಲ. ಈಲ್ಲಾ ಹಾಗೂ ಇತರೆ ಆಸ್ಪತ್ರೆಗಳಲ್ಲಿ ಮಾಸ್ಕ್, ಗ್ಲೌಸ್ ಮತ್ತಿತರೆ ರೋಗ ತಡೆಗಟ್ಟಲು ಬೇಕಾದ ಸಾಮಾಗ್ರಿಗಳನ್ನು ಸಾಕಷ್ಟು ಖರೀದಿ ಮಾಡಲು ಸೂಚನೆ ನೀಡಲಾಗಿದೆ ಎಂದರು.
ಸಮುದಾಯದಲ್ಲಿ ರೋಗ ಹರಡುವಿಕೆಗೆ ಅವಕಾಶ ನೀಡದಿರಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ವಾರದ ಸಂತೆಗೆಗಳನ್ನು ಅವಶುವಿದ್ದರೆ ಮಾತ್ರ ರದ್ದುಗೊಳಿಸಲಾಗುವುದು, ನಮ್ಮ ಜಿಲ್ಲೆಯಲ್ಲಿ ಯಾವುದೇ ಸೋಂಕು ಪೀಡಿತ ರೋಗಿಗಳು ಇದೂವರೆಗೂ ಪತ್ತೆಯಾಗಿಲ್ಲ ಹಾಗೂ ರೋಗ ಪತ್ತೆ ಹಚ್ಚಿದರೆ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳುರು ವೆನ್ಲಾಕ್ ಆಸ್ಪತ್ರೆ ಮತ್ತು ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ಕಳುಹಿಸಿಕೊಡಲು ವ್ಯವಸ್ಥೆ ಮಾಡಲಾಗಿದೆ. ನಾವು ಆತಂಕಪಡುವ ಅವಶ್ಯಕತೆ ಇಲ್ಲ. ಏಪ್ರಿಲ್ 15ರವರೆಗೆ ಸಮುದಾಯದಲ್ಲಿ ಕೊರೊನಾ ಹರಡುವುದನ್ನು ತಡೆಗಟ್ಟುವುದನ್ನು ನಾವೆಲ್ಲರೂ ಸವಾಲಾಗಿ ತೆಗೆದುಕೊಂಡು ಎಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ, ಜವಾಬ್ದಾರಿಯಿಂದ ಪಾಲಿಸಿ ರೋಗ ಬರುವುದನ್ನು ಎಲ್ಲರೂ ಸೇರಿ ತಡೆಯಬೇಕು ಎಂದು ಮನವಿ ಮಾಡಿದರು.
ಸುದ್ಧಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಎಸ್. ಪೂವಿತ, ಅಪರ ಜಿಲ್ಲಾಧಿಕಾರಿ ಡಾ. ಕುಮಾರ್ ಮತ್ತು ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಕೊರೊನಾ ಮುನ್ನೆಚ್ಚರಿಕೆ – ಹೊರಗಿನ ಪ್ರವಾಸಿಗರು ಜಿಲ್ಲೆಗೆ ಬರುವುದನ್ನು ಮುಂದೂಡಲು ಜಿಲ್ಲಾಧಿಕಾರಿ ಡಾ.ಬಗಾದಿ...









