ಚಿಕ್ಕಮಗಳೂರು : ಗ್ರಾಮೀಣರು ಮತ್ತು ರೈತರು ಆರ್ಥಿಕವಾಗಿ ಸಬಲರಾಗುವ ನಿಟ್ಟಿನಲ್ಲಿ ಜಾನುವಾರು ಸಾಕಾಣಿಕೆಗೆ ಮುಂದಾಗಬೇಕು : ಹಿರಿಗಯ್ಯ

256
firstsuddi

ಚಿಕ್ಕಮಗಳೂರು : ಗ್ರಾಮೀಣರು ಮತ್ತು ರೈತರು ಆರ್ಥಿಕವಾಗಿ ಸಬಲರಾಗುವ ನಿಟ್ಟಿನಲ್ಲಿ ಜಾನುವಾರು ಸಾಕಾಣಿಕೆಗೆ ಮುಂದಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯಸ್ಥಾಯಿ ಸಮಿತಿ ಅಧ್ಯಕ್ಷ ಹಿರಿಗಯ್ಯ ಸಲಹೆ ಮಾಡಿದರು.
ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ತಾಲ್ಲೂಕಿನ ವಸ್ತಾರೆಯಲ್ಲಿ ಇಂದು ಏರ್ಪಡಿಸಿದ್ದ ಮಿಶ್ರ ತಳಿ ಹಸುಗಳು ಮತ್ತು ಕರುಗಳ ಪ್ರದರ್ಶನ ಹಾಗೂ ಬರಡು ರಾಸು ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಿಂದೆ ಗ್ರಾಮೀಣ ಪ್ರದೇಶದ ಜನರು ಮತ್ತು ರೈತರ ಪ್ರತಿ ಮನೆಗಳಲ್ಲೂ ಬಹಳಷ್ಟು ಸಂಖ್ಯೆಯಲ್ಲಿ ಜಾನುವಾರುಗಳು ಇರುತ್ತಿದ್ದವು. ಅದರಿಂದಾಗಿ ಹಾಲು, ಮೊಸರು, ಬೆಣ್ಣೆ, ತುಪ್ಪ ಅವರ ಮನೆಯಲ್ಲಿ ಸದಾಕಾಲ ಇರುತ್ತಿತ್ತು, ಅವರ ಬದುಕು ಹಸನಾಗಿತ್ತು ಎಂದರು.
ಆದರೆ ಆಧುನಿಕತೆಯಿಂದಾಗಿ ನಮ್ಮಲ್ಲಿ ಇಂದು ಜಾನುವಾರುಗಳ ಸಂಖ್ಯೆ ಕ್ಷೀಣಿಸಿದೆ ಗ್ರಾಮೀಣರು ಮತ್ತು ರೈತರ ಮನೆಗಳಲ್ಲಿ ಅವು ಕಾಣೆಯಾಗಿವೆ ಎಂದು ವಿಷಾದಿಸಿದ ಅವರು ಪರಿಸ್ಥಿತಿ ಇದೇ ರೀತಿ ಮುಂದುವರೆದಲ್ಲಿ ಮುಂದಿನ ಪೀಳಿಗೆ ಜಾನುವಾರುಗಳನ್ನು ಚಿತ್ರಪಟದಲ್ಲಿ ನೋಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಾನುವಾರುಗಳು ಗ್ರಾಮೀಣರು ಮತ್ತು ರೈತರ ಬದುಕಿನ ಜೀವನಾಡಿ, ಅವುಗಳನ್ನು ಸಾಕಿ ಸಲಹಿದರೆ ಅವು ನಿಮ್ಮ ಕುಟುಂಬವನ್ನು ಸಾಕುತ್ತವೆ, ನೀವು ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.
ವಸ್ತಾರೆಯ ಪಶು ಚಿಕಿತ್ಸಾಲಯದ ನವೀಕರಣಕ್ಕೆ ತಮ್ಮ ಅನುದಾನದಿಂದ ಒಂದು ಲಕ್ಷ ರೂ ಒದಗಿಸುವುದಾಗಿ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ, ಗ್ರಾಮಸ್ಥರು ಮತ್ತು ರೈತರು ಪಶು ಇಲಾಖೆಯ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು, ಆ ಮೂಲಕ ಆರ್ಥಿಕವಾಗಿ ಸಧೃಡರಾಗಬೇಕು ಎಂದರು.
ಮಿಶ್ರತಳಿ ಹಸುಗಳ ಸಾಕಾಣಿಕೆ ಬಗ್ಗೆ ಸಮಾರಂಭದಲ್ಲಿ ತಜ್ಞರು ಗ್ರಾಮೀಣರು ಮತ್ತು ರೈತರಿಗೆ ಮಾಹಿತಿ ನೀಡಿದರು, ಬರಡು ರಾಸುಗಳ ತಪಾಸಣೆ ನಡೆಯಿತು.

72 ಕ್ಕೂ ಹೆಚ್ಚು ಮಿಶ್ರತಳಿ ಹಸುಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು, ಉತ್ತಮವಾಗಿ ಹಸುಗಳನ್ನು ಸಾಕಿದ ರೈತರಿಗೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.
ತಾಲ್ಲೂಕು ಪಂಚಾಯಿತಿ ಸದಸ್ಯ ಡಿ.ಜೆ.ಸುರೇಶ್, ಗ್ರಾ.ಪಂ.ಸದಸ್ಯ ರವಿ, ವಸ್ತಾರೆ ಪಶುಚಿಕಿತ್ಸಾಲಯದ ಹಿರಿಯ ಪಶುವೈದ್ಯಕೀಯ ಪರೀಕ್ಷಕ ಬಿ.ಎಂ.ಪ್ರಕಾಶ್, ವೈದ್ಯ ಡಾ|| ತೀರ್ಥಕುಮಾರ್, ಕೆ.ಆರ್.ಪೇಟೆ ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ|| ಎಂ.ಎಸ್.ಅಭಿಜಿತ್, ಜೋಳದಾಳಿನ ಡಾ|| ವಾಗೀಶ್ ಪಂಡಿತ್, ಬೆಳವಾಡಿ ಆಸ್ಪತ್ರೆಯ ವೈಧ್ಯಾಧಿಕಾರಿ ಡಾ|| ಅಶೋಕ್ ಉಪಸ್ಥಿತರಿದ್ದರು.