ಮೂಡಿಗೆರೆ : ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿ-ಗ್ರಾಮ ಪಂಚಾಯಿತಿ ವಿರುದ್ಧ ಸಾರ್ವಜನಿಕರ ಆಕ್ರೋಶ…

698
firstsuddi
  • ಸುಧೀರ್ ಬಿ.ಟಿ, ಮೂಡಿಗೆರೆ

ಮೂಡಿಗೆರೆ: ಪಟ್ಟಣದ ಕೊಲ್ಲಿಬೈಲಿನಿಂದ ಹಿಡಿದು ಮೂಡಿಗೆರೆಗೆ ಸಾಗುವ ಮುಖ್ಯ ರಸ್ತೆ ಎನ್.ಹೆಚ್-173 ಕೆ.ಎಂ.ರಸ್ತೆ ಇಕ್ಕೆಲಗಳಲ್ಲಿ ಕಸದ ರಾಶಿ ಹಾಗೂ ಗಿಡಗಂಟಿಗಳು ಬೆಳೆದು ಅನೈರ್ಮಲ್ಯ ವಾತಾವರಣ ಉಂಟಾಗಿದ್ದರೂ ಸಹ ಹೆಸಗಲ್ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾತ್ರ ಗ್ರಾಮ ಶುದ್ಧತೆ ಬಗ್ಗೆ ತಲೆಕಡಿಸಿಕೊಳ್ಳುತ್ತಿಲ್ಲವೆಂದು ಸಾರ್ವಜನಿಕರು ಆರೋಪಿಸಿದ್ದಾರೆ.
ರಸ್ತೆಗಳ ಇಕ್ಕೆಲಗಳು ಹಾಗೂ ಹೆಸಗಲ್ ಗ್ರಾಮ ಪಂಚಾಯತಿಗೆ ಸೇರಿದ ಬಹುತೇಕ ಬಡಾವಣೆಗಳಲ್ಲಿ ಕಸದ ರಾಶಿ ಎಲ್ಲೆಂದರಲ್ಲಿ ಬಿದ್ದಿದ್ದು, ಇದರ ಜೊತೆಗೆ ಮಳೆಗಾಲದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸದ ಕಾರಣ ಗ್ರಾಮದ ನೈರ್ಮಲ್ಯಕ್ಕೆ ಧಕ್ಕೆ ಉಂಟುಮಾಡಿದೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಮಳೆಗಾಲ ಕಳೆದು 3 ತಿಂಗಳು ಕಳೆದರೂ ಸಹ ಇನ್ನೂ ಕೂಡ ಯಾವುದೇ ಕ್ರಮ ಕೈಗೊಳ್ಳದಿರುವುದು ಬೇಸರ ಮೂಡಿಸಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.

ಬಿಳಗುಳ ಮೂಲಕ ಎನ್.ಹೆಚ್-173 ರಾಷ್ಟ್ರೀಯ ಹೆದ್ದಾರಿ ಕೆ.ಎಂ.ರಸ್ತೆ ಹಾದುಹೋಗಿದ್ದು, ರಾಜ್ಯದ ವಿವಿಧ ಊರುಗಳಿಂದ ಸೇರಿದಂತೆ ತಾಲ್ಲೂಕಿನ ವಿವಿಧ ಭಾಗಗಳಿಂದ ಈ ರಸ್ತೆ ಮುಖಾಂತರ ಸಾವಿರಾರು ವಾಹನಗಳು ಸಂಚಾರ ಮಾಡುತ್ತವೆ. ಸಹಜವಾಗಿಯೇ ವಾಹನಗಳಿಂದ ಎಸೆದ ತ್ಯಾಜ್ಯ ವಸ್ತುಗಳು ರಸ್ತೆಯ ಮೇಲೆ ಹಾಗೂ ಇಕ್ಕೆಲಗಳಲ್ಲಿ ಬಿದ್ದಿದ್ದು ಜನಸಾಮಾನ್ಯರು ತಿರುಗಾಡುವಾಗ ಅಸಹ್ಯಕರ ವಾತಾವರಣ ಉಂಟಾಗುತ್ತದೆ. ಕಸ ವಿಲೇವಾರಿ ಸ್ಥಳೀಯ ಗ್ರಾಮ ಪಂಚಾಯತಿಗೆ ಸೇರಿದ್ದರೂ ಸಹ ಬೇಜವಾಬ್ದಾರಿತನದಿಂದ ಸುಮ್ಮನಿರುವುದು ತೊಂದರೆಗೆ ಕಾರಣವಾಗಿದೆ ಎಂದು ಸ್ಥಳೀಯ ರಾಜೇಶ್ ಗೌಡ ಆರೋಪ ಮಾಡಿದರು.

ಬಹುತೇಕ ಕಡೆ ರಸ್ತೆ ಪಕ್ಕದಲ್ಲಿ ಗಿಡಗಂಟಿಗಳು ಬೆಳೆದು ನಿಂತಿರುವುದರಿಂದ ಕಡಿಮೆ ಜಾಗದಲ್ಲಿ ಪಾದಚಾರಿಗಳು ತಿರುಗಾಡುವಂತಾಗಿದೆ. ಶಾಲಾ ಮಕ್ಕಳು ಈ ರಸ್ತೆ ಮುಖಾಂತರವೇ ಶಾಲೆಗೆ ತೆರಳುತ್ತಾರೆ, ಗಿಡಗಂಟಿಗಳಿಂದ ಫುಟ್‍ಪಾತ್ ವಿಸ್ತೀರ್ಣ ಕಡಿಮೆ ಇರುವುದರಿಂದ ರಸ್ತೆಯ ಮೇಲೆ ಮಕ್ಕಳು ಸಾಗುತ್ತಾರೆ. ರಸ್ತೆಯಲ್ಲಿ ವೇಗವಾಗಿ ಸಾಗುವ ವಾಹನಗಳಿಗೆ ಮಕ್ಕಳು ಸಿಕ್ಕಿದರೆ ಸಮಸ್ಯೆ ಎದುರಾಗುತ್ತದೆ. ಇಂಥಹ ಸಂದರ್ಭದಲ್ಲಿ ಅಪಘಾತ ಮಾಡಿದ ವಾಹನ ಸವಾರರನ್ನು ಬಲಿಪಶು ಮಾಡಲಾಗುತ್ತದೆ. ಇದಿಷ್ಟೇ ಅಲ್ಲದೆ ಗಿಡಗಂಟಿಗಳ ಒಳಗಿನಿಂದ ಹಲವು ಬಾರಿ ಹಾವು, ಮುಂಗುಸಿ, ನಾಯಿಗಳು, ದನಗಳು ಒಮ್ಮಲೆ ನುಗ್ಗಿಬರುವುದರಿಂದ ಹಲವು ವಾಹನ ಸವಾರರು ಅಪಘಾತಕ್ಕೆ ಒಳಗಾಗುತ್ತಿದ್ದಾರೆ. ಬೆಳಗ್ಗೆ ವಾಯುವಿಹಾರಕ್ಕೆ ತೆರಳುವಾಗ ಕಸದ ರಾಶಿಯಿಂದ ಹಾವುಗಳು ನುಗ್ಗಿಬಂದು ಮೈ ಮೇಲೆ ಎರಗಿದ ಹಲವು ಉದಾಹರಣೆಗಳಿದ್ದು, ಹಗಲಿನ ವೇಳೆಯಲ್ಲಿ ಕಸದ ರಾಶಿಯಲ್ಲಿ ಜೀವನ ಕಂಡುಕೊಂಡಿರುವ ನಾಯಿಗಳು ಪಾದಚಾರಿಗಳ ಮೇಲೆ ಎರಗುತ್ತಿವೆ. ಕೂಡಲೇ ಕಸ ವಿಲೇವಾರಿ ವಿಚಾರಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಬೇಕು ಎಂದು ಸುಶಾಂತ್ ನಗರದ ನಿವಾಸಿ ಪ್ರಭಾಕರ್ ಒತ್ತಾಯಿಸಿದರು.
ತಾಲ್ಲೂಕಿನ ಹೆಚ್ಚು ಆದಾಯ ಹೊಂದಿದ ಕೆಲವೇ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಒಂದಾದ ಹೆಸಗಲ್ ಗ್ರಾಮ ಪಂಚಾಯಿತಿಗೆ ಆದರ್ಶ ಗ್ರಾಮವಾಗುವ ಎಲ್ಲಾ ಅವಕಾಶಗಳು ಇದ್ದು, ಇರುವ ಆದಾಯದ ಜೊತೆಗೆ ಇನ್ನಷ್ಟು ಅನುದಾನವನ್ನು ಬಿಡುಗಡೆ ಮಾಡಿಸಿಕೊಂಡು ಗ್ರಾಮದ ಅಭಿವೃದ್ಧಿಯಲ್ಲಿ ಸಾಗಬೇಕಿದೆ. ಇದರ ಜೊತೆಗೆ ಇರುವ ಅವಕಾಶಗಳನ್ನು ಬಳಸಿಕೊಂಡು ಆಧುನಿಕ ತಂತ್ರಜ್ಞಾನ ಹಾಗೂ ಹೊಸ ಆಲೋಚನೆಗಳೊಂದಿಗೆ ಸಾಗಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.