ಚಿಕ್ಕಮಗಳೂರು : ಸೋಲಿನಲ್ಲೂ ಕಾಂಗ್ರೆಸ್ ಗೆ ತಿವಿದ ಸಚಿವ ಸಿ.ಟಿ.ರವಿ…

294

ಚಿಕ್ಕಮಗಳೂರು : ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ತೀರ್ಪನ್ನು ಸ್ವಾಗತಿಸಿ ಸಚಿವ ಸಿ.ಟಿ.ರವಿ ಸೋಲಿನಲ್ಲೂ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜಿಲ್ಲಾ ಪಂಚಾಯಿತಿಯಲ್ಲಿ ಮಾತನಾಡಿದ ಅವರು, ಫಲಿಶಾಂತ ಏನೇ ಇರಲಿ. ಜನಾಭಿಪ್ರಾಯವನ್ನು ನಾವು ಸ್ವಾಗತಿಸುತ್ತೇವೆ. ಆದರೆ ಕೆಲವರಿಗೆ ಒಂದು ಕಾಯಿಲೆ ಇರುತ್ತದೆ. ಗೆದ್ದಾಗ ಮೋದಿ ವಿರುದ್ಧ, ಬಿಜೆಪಿ ವಿರುದ್ಧ ಎಂದು ಸಂಭ್ರಮಿಸುವುದು, ಸೋತಾಗ ಇವಿಎಂ ಮೇಲೆ ಆರೋಪ ಮಾಡುತ್ತಾರೆ. ಅದು ಪ್ರಜಾಪ್ರಭುತ್ವಕ್ಕೆ ಮಾಡುವ ಅಪಮಾನ. ನಾವು ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡುವುದಿಲ್ಲ. ಫಲಿತಾಂಶವನ್ನು ತಿರುವಿ ಹಾಕುವುದಕ್ಕೆ ಇವಿಎಂಗೆ ನೆಟ್ ಕನೆಕ್ಷನ್ ಇರುವುದಿಲ್ಲ. ಅದು ಅವರಿಗೂ ಗೊತ್ತು ಎಂದು ಪರೋಕ್ಷವಾಗಿ ಕಾಂಗ್ರೆಸ್ಗೆ ತಿವಿದರು. ದೀರ್ಘ ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ದೆಹಲಿಯಲ್ಲಿ ಶೂನ್ಯ ಸಂಪಾದಿಸಿದೆ. ದೊಡ್ಡ ಪರಂಪರೆಯ ಕಾಂಗ್ರೆಸ್ ದೆಹಲಿಯಲ್ಲಿ ಅವಸಾನದ ಅಂಚಿನಲ್ಲಿದೆ. ಇನ್ನಾದರು ಕಾಂಗ್ರೆಸ್ಸಿಗರು ಟೀಕೆಯನ್ನೇ ಉದ್ಯೋಗ ಮಾಡಿಕೊಳ್ಳುವುದನ್ನು ಬಿಡಲಿ ಎಂದು ವ್ಯಂಗ್ಯವಾಡಿದ್ದಾರೆ. ನಾವು ಸೋಲು-ಗೆಲುವು ಎರಡನ್ನೂ ಕಂಡಿದ್ದೇವೆ. ಅದು ಸ್ವಾಭಾವಿಕ ಕೂಡ. ಲೀಡರ್ ಶಿಪ್, ಸಮಸ್ಯೆ, ಸ್ಥಳಿಯ ನಾಯಕತ್ವವನ್ನು ಆಧಾರಿಸಿ ಮತ ಹಾಕುತ್ತಾರೆ ಅನ್ನುವುದು ಸ್ಪಷ್ಟವಾಗುತ್ತದೆ. ನಮ್ಮದು ವಿರೋಚಿತ ಹೋರಾಟ, ಅಸಹಾಯಕತೆಯ ಶರಣಾಗತಿಯಲ್ಲ ಎಂದಿದ್ದಾರೆ. ವಿಪಕ್ಷಗಳು ಒಂದಾದಾಗ ನಮ್ಮ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂಬ ಸಂದೇಶವನ್ನು ಈ ಚುನಾವಣೆ ನೀಡಿದೆ. ನಾವು ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳುವತ್ತ ಗಮನ ಕೊಡುತ್ತೇವೆ. ನಮ್ಮದು ಚುನಾವಣೆ ಫಲಿತಾಂಶಕ್ಕಾಗಿ ಹುಟ್ಟಿರುವ ಪಕ್ಷವಲ್ಲ ದೇಶವನ್ನು ಸಮರ್ಥವಾಗಿ ಉಳಿಸಬೇಕೆಂಬ ಉದ್ದೇಶದಿಂದ ಹುಟ್ಟಿರುವ ಪಕ್ಷ. ನಾವು ಸೋಲು ಗೆಲುವಿನಿಂದ ವಿಚಲಿತರಾಗುವುದಿಲ್ಲ. ಸೋಲಿನಿಂದ ವಿಚಲಿತರಾಗುವುದು, ಅಧಿಕಾರ ಕಳೆದುಕೊಂಡ ಕೂಡಲೇ “ಫಾದರ್ ಪ್ರಾಪರ್ಟಿ” ಕಳೆದುಕೊಂಡಂತೆ ಆಡುವುದು ನಮ್ಮ ಪಕ್ಷದ ಜಾಯಮಾನವಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.