ಚಿಕ್ಕಮಗಳೂರು: ಮೇಲ್ಮರವತ್ತೂರು ಶ್ರೀ ಆದಿಪರಾಶಕ್ತಿ ದೇವಿಯ ವಾರ್ಷಿಕ ಉತ್ಸವ ಇಲ್ಲಿನ ಲಕ್ಷ್ಮೀಶನಗರದಲ್ಲಿ ನೂರಾರು ಭಕ್ತರ ನಡುವೆ ಶುಕ್ರವಾರ ಶ್ರದ್ದಾಭಕ್ತಿಯಿಂದ ನಡೆಯಿತು.
ಉತ್ಸವದ ಅಂಗವಾಗಿ ಬೆಳಿಗ್ಗೆ ಆದಿಪರಾಶಕ್ತಿ ಅಮ್ಮನವರಿಗೆ ಅಭಿಷೇಕ, ವಿಶೇಷಪೂಜೆ, ಅಲಂಕಾರ, ಹೂವಿನ ಅರ್ಚನೆ, ಮಾಲಾಧಾರಿಗಳಿಂದ ಸಾಮೂಹಿಕ ಭಜನೆ, ಸ್ತ್ರೋತ್ರ ಪಠಣ, ಅಷ್ಟೋತ್ತರ, ನಾಮ ಸಂಕೀರ್ತನೆ ಜರುಗಿತು.
ಮಧ್ಯಾಹ್ನ ಮಹಾಮಂಗಳಾರತಿಯ ನಂತರ ಆದಿಪರಾಶಕ್ತಿ ಭಕ್ತ ಮಂಡಳಿಯಿಂದ ಬಡವರಿಗೆ ವಸ್ತ್ರದಾನ ಮಾಡಲಾಯಿತು, ಇದೇ ವೇಳೆ ನಡೆದ ಸಾರ್ವಜನಿಕ ಅನ್ನ ಸಂತರ್ಪಣೆಗೆ ಶಾಸಕ ಸಿ.ಟಿ.ರವಿ ಚಾಲನೆ ನೀಡಿದರು.
ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ಮಾತನಾಡಿದ ಭದ್ರಾವತಿಯ ಗುರುಸ್ವಾಮಿ ಭಾಗ್ಯಮ್ಮ ದೇವಾಲಯಗಳು, ರಥೋತ್ಸವಗಳು ಮತ್ತು ಉತ್ಸವಗಳಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ಶಾಂತಿ, ನೆಮ್ಮದಿ ದೊರೆಯುತ್ತದೆ, ಸಮಾಜದಲ್ಲಿ ಭಾವೈಕ್ಯತೆ ಮೂಡುತ್ತದೆ ಎಂದರು.
ಭಕ್ತ ಮಂಡಳಿ ಅಧ್ಯಕ್ಷ ಸಿ.ಬಿ.ನಾಗರಾಜ್ ಮಾತನಾಡಿ ಲೋಕ ಕಲ್ಯಾಣಾರ್ಥವಾಗಿ ಕಳೆದ 15 ವರ್ಷಗಳಿಂದ ಶ್ರೀ ಮೇಲ್ಮರವತ್ತೂರು ಆದಿಪರಾಶಕ್ತಿ ದೇವಿಯ ಉತ್ಸವವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಪಲ್ಲವಿ ಸಿ.ಟಿ.ರವಿ, ನಗರಸಭೆ ಸದಸ್ಯ ಜಗದೀಶ್, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಕೆ.ಪಿ.ರಾಜರತ್ನಂ, ಶಂಕರಪುರ ಮತ್ತು ಲಕ್ಷ್ಮೀಶನಗರ ನಾಗರೀಕ ಹೋರಾಟ ಸಮಿತಿಯ ಅಧ್ಯಕ್ಷ ಜೆ.ಸತ್ಯನಾರಾಯಣ, ಗೌರವಾಧ್ಯಕ್ಷ ಅನಿಲ್ ಆನಂದ್, ಭಕ್ತ ಮಂಡಳಿಯ ಕಾರ್ಯದರ್ಶಿ ಅಣ್ಣಪ್ಪ, ಖಜಾಂಚಿ ಮೂರ್ತಿ, ಮಧು, ಗೀತಾ ಉತ್ಸವದಲ್ಲಿ ಪಾಲ್ಗೊಂಡಿದ್ದರು.










