ರಾಜ್ಯಸಭೆಯಲ್ಲಿ ಅನುಚಿತ ವರ್ತನೆ-ಒಂದು ವಾರ 8 ಮಂದಿ ರಾಜ್ಯಸಭಾ ಸದಸ್ಯರ ಅಮಾನತು…

171
firstsuddi

ನವದೆಹಲಿ : ಕೃಷಿ ಮಸೂದೆ ವಿಚಾರವಾಗಿ ರಾಜ್ಯಸಭೆಯಲ್ಲಿ ಉಂಟಾದ ಗಲಭೆಗೆ ಸಂಬಂಧಿಸಿದಂತೆ 8 ಮಂದಿ ರಾಜ್ಯಸಭಾ ಸದಸ್ಯರನ್ನು ಒಂದು ವಾರಗಳ ಕಾಲ ಕಲಾಪದಿಮದ ಅಮಾನತು ಮಾಡಲಾಗಿದೆ. ನಿನ್ನೆ ರಾಜ್ಯಸಭೆಯಲ್ಲಿ ಕೃಷಿ ಮಸೂದೆ ಬಗ್ಗೆ ಚರ್ಚೆ ನಡೆಯುತ್ತಿದ್ದ ವೇಳೆ ರಾಜ್ಯ ಸಭೆ ಅಧ್ಯಕ್ಷ ಕೃಷಿ ಮಸೂದೆಯನ್ನು ಮತಕ್ಕೆ ಹಾಕಿದ್ದರು. ಮಸೂದೆಗಳನ್ನು ಪರಿಶೀಲನಾ ಸಮಿತಿಗೆ ಕಳಿಸುವ ನಿರ್ಣಯವನ್ನು ಧ್ವನಿಮತಕ್ಕೆ ಹಾಕುವುದಾಗಿ ಉಪ ಸಭಾಪತಿ ಹರಿವಂಶ ಸಿಂಗ್ ಪ್ರಕಟಿಸುತ್ತಿದ್ದಂತೆ ಆಕ್ರೋಶಗೊಂಡ ಕೆಲವು ಸಂಸದರು ಕಲಾಪಕ್ಕೆ ಅಡ್ಡಿ ಪಡಿಸಿದ್ದರು. ಅಲ್ಲದೇ ಟಿಎಂಸಿ ಸಂಸದ ಡೆರೆಕ್ ಒಬ್ರಯಾನ್ ಸದನದ ಬಾವಿಗಿಳಿದು ಬಿಲ್ ಅರಿದು ಆಕ್ರೋಶ ವ್ಯಕ್ತಪಡಿಸಿದರು. ಇವರೊಂದಿಗೆ ಕರ್ನಾಟಕದ ಕಾಂಗ್ರೆಸ್ ಸಂಸದ ಸೈಯದ್ ನಾಸೀರ್ ಹುಸೇನ್, ಸಂಜಯ್ ಸಿಂಗ್, ರಾಜು ಸತವ್, ಕೆ.ಕೆ ರಾಗೇಶ್, ರಿಪುನ್ ಬೋರಾ, ಡೋಲಾ ಸೇನ್ ಮತ್ತು ಎಲಮರನ್ ಕರೀಮ್ ಸೇರಿ ಬಾವಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು.
ಇಂದು ಕಲಾಪ ಆರಂಭವಾಗುತ್ತಿದ್ದಂತೆ ನಿನ್ನೆಯ ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರು, ನಿನ್ನೆ ಉಪಾಧ್ಯಕ್ಷರ ಕರ್ತವ್ಯ ನಿಭಾಯಿಸಲು ಅಡ್ಡಿಪಡಿಸಿದ ಆರೋಪದ ಮೇಲೆ 8 ಮಂದಿ ರಾಜ್ಯಸಭಾ ಸಂಸದರನ್ನು ಒಂದು ವಾರಗಳ ಕಾಲ ಅಮಾನತುಗೊಳಿಸಿದ್ದಾರೆ.